ಮೂಲ್ಕಿ: ಬಿಲ್ಲವ ಸಮಾಜವನ್ನು ಪ್ರತಿನಿ ಧಿಸುವ ಮೂಲಕ ರಾಜ್ಯ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಆಯ್ಕೆಯಾಗಿರುವ ಜಯಮಾಲ ಹಾಗೂ ಜನಮತದಿಂದ ಶಾಸಕರಾಗಿ ಆಯ್ಕೆಯಾಗಿರುವ ಉಮಾನಾಥ ಕೋಟ್ಯಾನ್ ಮೂಡಬಿದಿರೆ, ವಿ. ಸುನಿಲ್ ಕುಮಾರ್ ಕಾರ್ಕಳ, ಕುಮಾರ ಬಂಗಾರಪ್ಪ ಸೊರಬ, ಹಾಲಪ್ಪ
ಸಾಗರ ಹಾಗೂ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಹರೀಶ್ ಕುಮಾರ್ ಬೆಳ್ತಂಗಡಿ ಇವರನ್ನು ಜು. 22ರಂದು
ಮೂಲ್ಕಿಯಲ್ಲಿ ಸಮ್ಮಾನಿಸಲಾಗುವುದು ಎಂದು ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಹೇಳಿದರು.
ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಭವನದಲ್ಲಿ ರವಿವಾರ ನಡೆದ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮಂಡಲದ ವಾರ್ಷಿಕ ಸಭೆಯಲ್ಲಿ ಸಮಾಜದ ಜನಪ್ರತಿನಿಧಿಗಳನ್ನು ಗೌರವಿಸುವುದರೊಂದಿಗೆ,’ಜೀವನೋತ್ಸಾಹ’ ಕಾರ್ಯಕ್ರಮವನ್ನು ವಿವಿಧ ಸಂಘಗಳಲ್ಲಿ ಸಂಯೋಜಿಸಿ ಪರಿಣಾಮಕಾರಿಯಾಗಿ ರೂಪಿಸುವ ಬಗ್ಗೆ ನಿರ್ಧರಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಪಾವೂರು ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್, ಸಹ ಕೋಶಾಧಿಕಾರಿ ಸಂತೋಷ್ ಕೋಟ್ಯಾನ್ ಉಪ್ಪೂರು, ಬಿಲ್ಲವ ಅಸೋಸಿಯೇಷನ್ ಮುಂಬಯಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಉಪಸ್ಥಿತರಿದ್ದರು. ಗಣೇಶ ಪೂಜಾರಿ ಹಾಗೂ ಕೆ. ವಾಮನ್ ಸಲಹೆ ಸೂಚನೆಗಳನ್ನು ನೀಡಿದರು. ಜತೆ ಕಾರ್ಯದರ್ಶಿ ಗಂಗಾಧರ ಪೂಜಾರಿ ನಿರೂಪಿಸಿದರು.