Advertisement

ಜು. 1ರಿಂದಲೇ ದೇಶಾದ್ಯಂತ ಜಿಎಸ್‌ಟಿ ಜಾರಿ

01:18 PM Apr 14, 2017 | Team Udayavani |

ದಾವಣಗೆರೆ: ಸರಕು, ಸೇವಾ ತೆರಿಗೆ ಪದ್ಧತಿ ಜುಲೈ 1ರಿಂದಲೇ ದೇಶಾದ್ಯಂತ ಜಾರಿಯಾಗಲಿದೆ ಎಂದು ಬೆಂಗಳೂರು ವಿಭಾಗದ ಮುಖ್ಯ ತೆರಿಗೆ ಆಯುಕ್ತ ಎಂ.ವಿ. ವಿನೋದ್‌ಕುಮಾರ್‌ ತಿಳಿಸಿದ್ದಾರೆ. 

Advertisement

ತಾಲ್ಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರ ಅದ್ಯಯನ ಮತ್ತು ಸಂಶೋಧನಾ ವಿಭಾಗ ಗುರುವಾರ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ: ಸವಾಲುಗಳು ಮತ್ತು ಅವಕಾಶ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಹೊಸ ತೆರಿಗೆ ನೀತಿ ರೂಪುಗೊಂಡಿದೆ. ಈ ಕಾಯ್ದೆ ಜು.1ರಿಂದಲೇ  ಜಾರಿಗೆ ಬರಲಿದೆ ಎಂದರು. ಹೊಸ ತೆರಿಗೆ ಪದ್ಧತಿಯಿಂದ ಸಾಕಷ್ಟು ಲಾಭ ಇದೆ. ವ್ಯಾಪಾರಸ್ಥರು, ಸೇವೆದಾರರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. 

ಪ್ರಾರಂಭದ  ಹಂತದಲ್ಲಿ ಸಮಸ್ಯೆ ಅನ್ನಿಸುತ್ತದೆ. ಅದನ್ನು ನಿಭಾಯಿಸಿಕೊಂಡು ಹೊಸ ತೆರಿಗೆ ಪದ್ಧತಿಗೆ ಒಗ್ಗಿಕೊಳ್ಳಬೇಕಾಗುತ್ತದೆ ಎಂದರು. ಬೆಂಗಳೂರು ವಿವಿ ವಿಶ್ರಾಂತ ಪ್ರೊ| ಕೆ. ಈರೇಶಿ ಮಾತನಾಡಿ, ಸರಕು, ಸೇವೆ ತೆರಿಗೆ ಕಾಯಿದೆ ಜಾರಿಗೆ ಬಂದರೆ ದೇಶದಲ್ಲಿ ನಡೆಯುವ ವ್ಯಾಪಾರ, ವಹಿವಾಟು ದಾಖಲಾಗುವುದರಿಂದ ಸರ್ಕಾರಕ್ಕೆ ತೆರಿಗೆ ಮೂಲಕ ಸಿಗುವ ಆದಾಯ ದ್ವಿಗುಣ ಆಗಲಿದೆ ಎಂದರು.

ವಸ್ತುಗಳ ಮೇಲಿನ ತೆರಿಗೆ ಮತ್ತ ಸೇವೆಗಳ ಮೇಲಿನ ತೆರಿಗೆ ಒಂದಗೂಡಿಸಿ, ಒಂದೇ ರೀತಿಯ ತೆರಿಗೆಯಾಗಿ ವಸೂಲು ಮಾಡಲು ಈ ಹೊಸ ಕಾಯಿದೆ ಸಹಕಾರಿಯಾಗಿದೆ. ಇಲ್ಲಿಯವರೆಗೆ ಹಲವಾರು ವ್ಯಾಪಾರಸ್ಥರು, ಉದ್ಯಮದಾರರು ತೆರಿಗೆ ಪಾವತಿಸುವಲ್ಲಿ ಮೋಸ ಮಾಡಲು ಸಾಧ್ಯ ಇತ್ತು. ಇನ್ನು ಮುಂದೆ ವಂಚನೆ ಸಾಧ್ಯವಿಲ್ಲ.

Advertisement

ಎಲ್ಲಾ ವ್ಯವಹಾರ ಆನ್‌ಲೈನ್‌ನಲ್ಲೇ ನಡೆಯುವುದರಿಂದ ತೆರಿಗೆ ವಂಚನೆ ಮಾಡುವುದು ಸಾಧ್ಯವಿಲ್ಲ. ಪ್ರತೀ ವಹಿವಾಟು ಆನ್‌ಲೈನ್‌ನಲ್ಲಿ ಕಾಣಸಿಗಲಿದೆ ಎಂದು ಅವರು ಹೇಳಿದರು. ವಿವಿ ಕುಲ ಸಚಿವ ಪ್ರೊ| ಎಸ್‌.ವಿ. ಹಲ್ಸೆ, ವಾಣಿಜ್ಯ ವಿಭಾಗದ ಡೀನ್‌ ಡಾ| ಜಿ.ಟಿ. ಗೋವಿಂದಪ್ಪ ವೇದಿಕೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next