ದೆಹಲಿ: ನೂತನ 5ಜಿ ತಂತ್ರಜ್ಞಾನಕ್ಕಾಗಿ ಟೆಲಿಕಾಂ ಸಂಸ್ಥೆಗಳು ಮುಗಿಬಿದ್ದಿರುವಂತೆಯೇ ಇತ್ತ ಬಾಲಿವುಡ್ ನಟಿ
ಜ್ಯೂಹಿ ಚಾವ್ಲಾ ಮಾತ್ರ ಈ ತಂತ್ರಜ್ಞಾನ ವಿರುದ್ಧ ದೆಹಲಿ ಹೈಕೋರ್ಟ್ ಕದ ತಟ್ಟಿದ್ದಾರೆ.
ವಿಕಿರಣ ಜಾಗೃತಿ ಅಭಿಯಾನದ ಕಾರ್ಯಕರ್ತೆ ಕೂಡ ಆಗಿರುವ ಜೂಹಿ ಚಾವ್ಲಾಇಂದು ( ಮೇ.31) ತಮ್ಮ ವಕೀಲೆ ದೀಪಕ್ ಖೊಸ್ಲಾ ಮೂಲಕ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಒಂದು ಟೆಲಿಕಾಂ ಸಂಸ್ಥೆಗಳು 5ಜಿ ತಂತ್ರಜ್ಞಾನವನ್ನು ಆರಂಭಿಸಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದಿನದ 24 ಗಂಟೆಯಂತೆ ವರ್ಷದ 364 ದಿನವೂ ವಿಕಿರಣಗಳು ಹೊರಸೂಸಿವೆಯಿಂದ ಭೂಮಿ ಮೇಲಿನ ಜೀವರಾಶಿಗಳಿಗೆ ಅಪಾಯವಾಗಲಿದೆ.
ಭೂಮಿ ಮೇಲೆ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಸಸ್ಯ ವರ್ಗವು ತೊಂದರೆಗೆ ಸಿಲುಕಲಿದೆ. ಮಾನವ ಆರೋಗ್ಯದ ಮೇಲೆ ರೇಡಿಯೊ ಫ್ರೀಕ್ವೆನ್ಸಿಯ ವಿಕಿರಣದಿಂದ ಆಗುವ ಸಂಭಾವ್ಯ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ಲೇಷಿಸದೇ 5ಜಿ ಮೊಬೈಲ್ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಬಾರದು ಎಂದು ತಮ್ಮ ಅರ್ಜಿ ಮೂಲಕ ಕೇಳಿಕೊಂಡಿದ್ದಾರೆ.
ಜ್ಯೂಹಿ ಚಾವ್ಲಾ ಅವರ ಅರ್ಜಿಯು ನ್ಯಾಯಾಧೀಶ ಸಿ ಹರಿಚಂದ್ರ ಅವರ ಪೀಠ ಸ್ವೀಕರಿಸಿದ್ದು, ಜೂನ್ 2 ರಂದು ಇದರ ವಿಚಾರಣೆ ನಡೆಯಲಿದೆ.
ಇನ್ನು 5ಜಿ ಮೊಬೈಲ್ ತಂತ್ರಜ್ಞಾನದ ವಿರುದ್ಧ ಜ್ಯೂಹಿ ಚಾವ್ಲಾ ಅವರ ಹೋರಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರು 2018 ರಲ್ಲಿ ಮಹಾರಾಷ್ಟ್ರ ರಾಜ್ಯದ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು, ಮೊಬೈಲ್ ಟವರ್ ಆಂಟೆನಾಗಳಿಂದ ಹಾಗೂ ವೈ ಫೈ ಹಾಟ್‌ಸ್ಪಾಟ್‌ಗಳ ಎಲೆಕ್ಟ್ರೋ ಮ್ಯಾಗ್ನಟಿಕ್ ರೇಡಿಯೇಷನ್ (ಇಎಂಎಫ್) ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.