ಪ್ರೇಮಲೋಕದ ಸುಂದರಿ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಟಿ ಜೂಹಿಚಾವ್ಲಾ ಮತ್ತೂಂದು ಕನ್ನಡ ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೌದು, ಇತ್ತೀಚೆಗೆ ರಮೇಶ್ ಅರವಿಂದ್ ಅಭಿನಯದ “ಪುಷ್ಪಕ ವಿಮಾನ’ ಚಿತ್ರದ “ಜಲ್ಸಾ ಜಲ್ಸಾರೇ…’ ಹಾಡಿಗೆ ಸ್ಟೆಪ್ ಹಾಕಿದ್ದ ಜೂಹಿಚಾವ್ಲಾ ಈಗ,ನಿರ್ದೇಶಕ ಸರದೇಶಪಾಂಡೆ ಅವರ “ವೆರಿಗುಡ್’ ಎಂಬ ಹೊಸ ಚಿತ್ರದಲ್ಲಿ ಅವರು ನಟಿಸಲಿದ್ದಾರೆ.
ಇಷ್ಟಕ್ಕೂ ಜೂಹಿಚಾವ್ಲಾ ನಟಿಸುತ್ತಿರುವುದು ಆ ಚಿತ್ರದ ಹಾಡೊಂದರಲ್ಲಿ ಮಾತ್ರ. ಸರದೇಶಪಾಂಡೆ ಅವರು “ಬಾಲ ಎಕ್ಸ್‌ಪ್ರೆಸ್’ ಎಂಬ ಕ್ಯಾಂಪ್ ಶುರು ಮಾಡಿದ್ದರು. ಆ ಕ್ಯಾಂಪ್‌ನಲ್ಲಿ 120 ಮಕ್ಕಳು ನಟನೆ, ನೃತ್ಯ, ಇತ್ಯಾದಿ ಕಲಿಯುತ್ತಿದ್ದಾರೆ. ಆ ಮಕ್ಕಳನ್ನು ಇಟ್ಟುಕೊಂಡು ಸರದೇಶಪಾಂಡೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು “ವೆರಿಗುಡ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ “ಟೆನ್ ಔಟ್ ಆಫ್ ಟೆನ್’ ಎಂಬ ಅಡಿಬರಹವೂ ಇದೆ.
ಅಲ್ಲಿಗೆ ಇದು ಮಕ್ಕಳ ಕುರಿತ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಎಲ್ಲಾ ಸರಿ, ಜೂಹಿಚಾವ್ಲಾ ಅವರು ಇಲ್ಲಿ ಯಾವ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ? ಈ ಪ್ರಶ್ನೆಗೆ ನಿರ್ದೇಶಕರು ಉತ್ತರ ಕೊಡೋದು ಹೀಗೆ, “ಅವರಿಲ್ಲಿ ಸಂಗೀತ ಶಿಕ್ಷಕಿ. “ಕಲಿಸು ಗುರುವೇ ಲಿಸು..’ ಎಂಬ ಹಾಡಲ್ಲಿ ಅವರು ಮಕ್ಕಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡು ಬರೆದಿರೋದು ರಂಗಾಯಣದ ರಾಮನಾಥ್. ಈ ಹಿಂದೆ ಗಾಯಕ ರಾಜು ಅನಂತಸ್ವಾಮಿ ಅವರು ಈ ಹಾಡಿಗೆ ರಾಗ ಸಂಯೋಜಿಸಿ, ಹಾಡಿದ್ದರು. ಈಗ ಚಿತ್ರದ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಿನಿಮಾಗೆ ಬೇಕಾದ ರೀತಿಯಲ್ಲಿ ಅದನ್ನು ಸಂಯೋಜಿಸಿ, ಹಾಡಿಸಿದ್ದಾರೆ.
ಆ ಹಾಡಲ್ಲಿ ಜೂಹಿಚಾವ್ಲಾ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಯಲ್ಲಾಪುರ ಬಳಿ ಆ ಹಾಡಿನ ಚಿತ್ರೀಕರಣ ನಡೆಯಲಿದೆ. ಅವರು ಬರುವ ಡೇಟ್ ಅಂತಿಮವಾಗಿಲ್ಲ. ಆದರೆ, ಮೇ ತಿಂಗಳಲ್ಲೇ ಆ ಹಾಡಿನ ಚಿತ್ರೀಕರಣ ನಡೆಯಲಿದೆ’ ಎಂದು ವಿವರ ಕೊಡುತ್ತಾರೆ ಸರದೇಶಪಾಂಡೆ. ಏಪ್ರಿಲ್ 24 ರಂದು ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದಲ್ಲಿ ಎರಡು ಹಾಡುಗಳಿವೆ “ವೆರಿಗುಡ್’ ಎಂಬ ಶೀರ್ಷಿಕೆ ಕುರಿತ ಹಾಡೊಂದು ಇದೆ. ಚಿತ್ರಕ್ಕೆ
ಕಲ್ಯಾಣ್‌ರಾಜ್ ಕಪೂರ್‌ಕರ್ ಅವರು ಸಹ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಸಾಥ್ ನೀಡಿದ್ದಾರೆ.