Advertisement

ತೇಜಸ್ವಿ “ಜುಗಾರಿ ಕ್ರಾಸ್‌’ಗೆ ದೃಶ್ಯರೂಪ

12:30 AM Feb 15, 2019 | |

ಲೇಖಕ ಪೂರ್ಣಚಂದ್ರ ತೇಜಸ್ವಿಯವರ “ಅಬಚೂರಿನ ಪೋಸ್ಟಾಫೀಸು’, “ತಬರನ ಕಥೆ’, “ಕಿರಗೂರಿನ ಗಯ್ನಾಳಿಗಳು’ ಮೊದಲಾದ ಕೃತಿಗಳು ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದು ಜನಪ್ರಿಯವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಆ ಸಾಲಿಗೆ ತೇಜಸ್ವಿ ಅವರ ಮತ್ತೂಂದು ಕೃತಿ “ಜುಗಾರಿ ಕ್ರಾಸ್‌’ ಸೇರ್ಪಡೆಯಾಗುತ್ತಿದೆ. ಹೌದು, 90ರ ದಶಕದಲ್ಲಿ ನಿಯಕಕಾಲಿಕವೊಂದರಲ್ಲಿ ಸರಣಿ ಮಾಲಿಕೆಯಲ್ಲಿ ಪ್ರಕಟಗೊಂಡು, ನಂತರ ಕಾದಂಬರಿಯಾಗಿ ಮುದ್ರಣಗೊಂಡ “ಜುಗಾರಿ ಕ್ರಾಸ್‌’ ಅನ್ನು ಕನ್ನಡದ ಹಿರಿಯ ನಿರ್ದೇಶಕ ಟಿ.ಎಸ್‌ ನಾಗಾಭರಣ ದೃಶ್ಯ ರೂಪದಲ್ಲಿ ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಸಂಖ್ಯಾತ ಓದುಗರನ್ನು ಇಂದಿಗೂ ರೋಚಕವಾಗಿ ಕಾಡುವ “ಜುಗಾರಿ ಕ್ರಾಸ್‌’, ಅದೇ ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತರಲು ನಾಗಾಭರಣ ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.  

Advertisement

“ಬಹಳ ವರ್ಷಗಳಿಂದ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್‌ ಕಾದಂಬರಿಯನ್ನು ಸಿನಿಮಾ ಮಾಡಬೇಕು ಎಂಬ ಕನಸಿತ್ತು …

   - “ಜುಗಾರಿ ಕ್ರಾಸ್‌’ ಚಿತ್ರದ ಮುಹೂರ್ತ ಮುಗಿಸಿಕೊಂಡು ಬಂದ ನಿರ್ದೇಶಕ ಟಿ.ಎಸ್‌.ನಾಗಾಭರಣ ಮಾಧ್ಯಮದ ಎದುರು ಕುಳಿತು ತಮ್ಮ ಕನಸಿನ ಸಿನಿಮಾ ಬಗ್ಗೆ ಮಾತನಾಡ ತೊಡಗಿದರು. ತುಂಬಾ ವರ್ಷಗಳಿಂದ “ಜುಗಾರಿ ಕ್ರಾಸ್‌’ ಅನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡಿದ್ದರಂತೆ ನಾಗಾಭರಣ. ಈಗ ಆ ಕನಸು ಈಡೇರುತ್ತಿದೆ. ” ತೇಜಸ್ವಿಯವರು ಬದುಕಿದ್ದಾಗಲೇ ಕಾದಂಬರಿಯನ್ನು ಸಿನಿಮಾ ಮಾಡುವ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೆ. ಬಳಿಕ ಕಾರಣಾಂತರಗಳಿಂದ ಅದನ್ನು ಮಾಡಲಾಗಲಿಲ್ಲ. ಇದರ ನಡುವೆಯೇ ಕಾದಂಬರಿಯ ಹಕ್ಕುಗಳನ್ನು ಬೇರೊಬ್ಬರು ಸಿನಿಮಾ ಮಾಡಲು ತೆಗೆದುಕೊಂಡಿದ್ದರು. ಹಾಗಾಗಿ “ಜುಗಾರಿ ಕ್ರಾಸ್‌’ ಅನ್ನು ಸಿನಿಮಾ ಮಾಡುವ ಯೋಚನೆ ಅಲ್ಲಿಗೇ ಬಿಡಬೇಕಾಯಿತು. ಅದಾದ ಬಹಳ ಸಮಯದ ನಂತರ ಹಕ್ಕುಗಳನ್ನು ಕೊಂಡುಕೊಂಡವರು “ಜುಗಾರಿ ಕ್ರಾಸ್‌’ ಸಿನಿಮಾ ಮಾಡುವ ಯೋಜನೆ ಕೈಬಿಟ್ಟು ಕಾದಂಬರಿಯ ಹಕ್ಕುಗಳನ್ನು ವಾಪಾಸ್‌ ನೀಡಿದರು. ಹಾಗಾಗಿ ಮತ್ತೆ “ಜುಗಾರಿ ಕ್ರಾಸ್‌’ ಅನ್ನು ಸಿನಿಮಾ ಮಾಡುವ ಯೋಜನೆ ಕೈಗೆತ್ತಿಕೊಂಡೆ. ಇಲ್ಲಿಯವರೆಗೆ ಸುಮಾರು 18 ಬಾರಿ ಇದಕ್ಕೆ ಬೇರೆ ಬೇರೆ ವರ್ಷನ್‌ನಲ್ಲಿ ಚಿತ್ರಕಥೆ ಬರೆಯಲಾಗಿದೆ. ಅಂತಿಮವಾಗಿ “ಜುಗಾರಿ ಕ್ರಾಸ್‌’ ಅನ್ನು ಸಿನಿಮಾ ಮಾಡುವ ನನ್ನ ಬಹುದಿನಗಳ ಕನಸು ನನಸಾಗುತ್ತಿದೆ’ ಎಂದರು. 

ಇನ್ನು ಭರಣ ಅವರು ಹೇಳುವಂತೆ, ಪೂರ್ಣಚಂದ್ರ ತೇಜಸ್ವಿಯವರ “ಜುಗಾರಿ ಕ್ರಾಸ್‌’ ಅವರನ್ನು ತುಂಬಾ ಕಾಡಿದಂತಹ ಕಾದಂಬರಿ. ಅದರ ಕಥಾವಸ್ತು, ಆಶಯ, ಹೂರಣ ಇಂದಿಗೂ ಬೆರಗು ಮೂಡಿಸುವಂಥದ್ದು. ಇಂಥ ಕೃತಿಯನ್ನು ಚಿತ್ರ ಮಾಡಿದರೆ ಹೇಗೆ ಎಂಬ ಯೋಚನೆ ಬಹಳ ವರ್ಷಗಳಿಂದ ಕಾಡುತ್ತಲೇ ಅವರನ್ನು ಇತ್ತಂತೆ. “ಜುಗಾರಿ ಕ್ರಾಸ್‌’ ಕಾಲ್ಪನಿಕ ಕಥೆಯನ್ನು ಇಂದಿನ ಪರಿಸ್ಥಿತಿ ಮತ್ತು ಪರಿಸರಕ್ಕೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡು ತೆರೆಮೇಲೆ ತರಲಾಗುತ್ತಿದೆಯಂತೆ. “ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಸಿನಿಮಾ ಶೈಲಿಗೆ ಬೇಕಾದ ಬದಲಾವಣೆಗಳಿದ್ದರೂ, ಎಲ್ಲೂ ತೇಜಸ್ವಿಯವರ ಮೂಲ ಕಥೆಯ ಆಶಯ, ಅಂಶಗಳಿಗೆ ಧಕ್ಕೆಯಾಗದಂತೆ ಅದನ್ನು ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ. 

“ಜುಗಾರಿ ಕ್ರಾಸ್‌’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇಲ್ಲಿಯವರೆಗೆ ಮಾಸ್‌ ಆ್ಯಂಡ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾಗಳಲ್ಲಿ ಮಿಂಚಿರುವ ಚಿರುಗೆ ಇದು ಮೊದಲ ಕಾದಂಬರಿ ಆಧಾರಿತ ಚಿತ್ರವಾಗಿದ್ದು, “ಜುಗಾರಿ ಕ್ರಾಸ್‌’ ಮೇಲೆ ಚಿರು ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. 

Advertisement

“ನಾನು ಇಲ್ಲಿಯವರೆಗೂ ಈ ಥರದ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಎಂದೂ ಅಭಿನಯಿಸಿಲ್ಲ. ಹಾಗಾಗಿ ಇದು ನನಗೊಂದು ಹೊಸ ಅನುಭವ. ಚಿತ್ರದ ಪಾತ್ರ ಹೇಗೆ ತೆರೆಮೇಲೆ ಬರಬಹುದು ಎಂಬ ಕುತೂಹಲ ನನಗೂ ಇದೆ. ಚಿತ್ರದ ಪಾತ್ರಕ್ಕಾಗಿ ಒಂದಷ್ಟು ಹೋಂ ವರ್ಕ್‌ ಕೂಡ ಶುರುವಾಗಿದೆ. ಜುಗಾರಿ ಕ್ರಾಸ್‌ ಖಂಡಿತಾ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಚಿರು.

ಉಳಿದಂತೆ “ಜುಗಾರಿ ಕ್ರಾಸ್‌’ನ ಇನ್ನಿತರ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ ಎಲ್ಲವೂ ಅಂತಿಮವಾಗುವ ಸಾಧ್ಯತೆ ಇದೆ. “ಜುಗಾರಿ ಕ್ರಾಸ್‌’ನ ದೃಶ್ಯಗಳನ್ನು ಛಾಯಾಗ್ರಹಕ ಹೆಚ್‌. ಸಿ ವೇಣು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯಲಿದ್ದಾರೆ. ಚಿತ್ರದ ಗೀತೆಗಳಿಗೆ ವಾಸುಕಿ ವೈಭವ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಹರೀಶ್‌ ಹಾಗಲವಾಡಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. “ಶ್ರೀ ಬನಶಂಕರಿ ಚಿತ್ರಾಲಯ’ ಬ್ಯಾನರ್‌ನಲ್ಲಿ ಎಂ. ಚಂದ್ರು (ಕಡ್ಡಿಪುಡಿ) “ಜುಗಾರಿ ಕ್ರಾಸ್‌’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿದ್ದು, ಪುನೀತ್‌ರಾಜಕುಮಾರ್‌, ಯಶ್‌ ಸೇರಿದಂತೆ ಇತರರು ಬಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ಜುಗಾರಿ ಕ್ರಾಸ್‌’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಸಿನಿ ಪ್ರಿಯರ ಗಮನ ಸೆಳೆಯುತ್ತಿದೆ. ಮಾರ್ಚ್‌ ವೇಳೆಗೆ ಚಿತ್ರದ ಚಿತ್ರೀಕರಣ ಆರಂಭಿಸಲು ನಾಗಾಭರಣ ಆ್ಯಂಡ್‌ ಟೀಮ್‌ ರೆಡಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next