ಹರಪನಹಳ್ಳಿ (ವಿಜಯನಗರ ಜಿಲ್ಲೆ): ರಾಜ್ಯ ಮಟ್ಟದ ಜುಡೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಗೋಲ್ಡ್ ಮೆಡಲ್ ಪಡೆದ ಸರ್ಕಾರಿ ಪದವಿ ಪೂರ್ವದ ಕಾಲೇಜಿನ ವಿದ್ಯಾರ್ಥಿನಿ ಕ್ರೀಡಾ ಸಾಧಕಿ ರಕ್ಷಿತಾಳಿಗೆ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯ ಮಟ್ಟದ ಕ್ರೀಡಾ ಸಾಧಕಿ ಎಂ.ರಕ್ಷಿತಾ ಹರಪನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಓದುತ್ತಿದ್ದಾಳೆ. ತಾಲೂಕಿನ ಹುಲಿಕಟ್ಟಿ ಗ್ರಾಮದ ಶ್ರೀನಿವಾಸ ಮತ್ತು ಕೆಂಚಮ್ಮರವರ ಸುಪುತ್ರಿ. ಬಡ ಕುಟುಂಬದಲ್ಲಿ ಜನಿಸಿದ್ದರೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾಳೆ.
ಕ್ಷೇತ್ರದ ಶಾಸಕ ಜಿ.ಕರುಣಾಕರ ರೆಡ್ಡಿ, ಶಾಸಕರ ಪುತ್ರ ವಿಷ್ಣು ರೆಡ್ಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಕಿರಣ್ ಶಾನಬೋಗ್ ಕ್ರೀಡಾ ಸಾಧಕಿ ರಕ್ಷಿತಾಳಿಗೆ ಅಭಿನಂದಿಸಿ ಹಾರೈಸಿದರು.
ಪದವಿ ಪೂರ್ವ ಇಲಾಖೆ ವತಿಯಿಂದ ನಡೆದ ರಾಜ್ಯ ಮಟ್ಟದ ಜುಡೋ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಕ್ಕೆ ಭಾಜನರಾಗಿರುವ ನಮ್ಮ ಕಾಲೇಜಿನ ಕ್ರೀಡಾ ಸಾಧಕಿ ರಕ್ಷಿತಾಳನ್ನು ತಾಲೂಕು ಆಡಳಿತ ಗುರುತಿಸಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿರುವುದು ಸಂತಸ ತಂದಿದೆ ಎಂದು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಸಿ.ಬಿ. ವೆಂಕಟೇಶ್ ಹಾಗೂ ಉಪನ್ಯಾಸಕ ವರ್ಗ ಹರ್ಷ ವ್ಯಕ್ತಪಡಿಸಿದರು.