Advertisement

ಯಾತ್ರಿಗಳ ದರೋಡೆ ಯತ್ನ: ಆರೋಪಿಗಳಿಗೆ 8 ವರ್ಷ ಕಠಿನ ಶಿಕ್ಷೆ

03:00 AM Jul 08, 2017 | Karthik A |

ಕುಂದಾಪುರ: ಕೇರಳದಿಂದ ಕೊಲ್ಲೂರು ದೇವಸ್ಥಾನಕ್ಕೆ ಕಾರಿನಲ್ಲಿ ಬರುತ್ತಿದ್ದ ಯಾತ್ರಾರ್ಥಿಗಳನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿ ಕಾರು ಪುಡಿಮಾಡಿದ ಪ್ರಕರಣ  ಸಂಬಂಧಪಟ್ಟಂತೆ ಐವರು ಆರೋಪಿಗಳಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶ ಕೆ. ಪ್ರಕಾಶ್‌ ಖಂಡೇರಿ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳಿಗೆ 8 ವರ್ಷಗಳ ಕಠಿನ ಸಜೆ ಹಾಗೂ ಪ್ರತಿಯೊಬ್ಬರೂ ತಲಾ ರೂ. 40 ಸಾವಿರ ದಂಡವನ್ನು ಹಾಗೂ ಸೆಕ್ಷನ್‌ 357 ದಂಡ ಪ್ರಕ್ರಿಯೆ ಸಂಹಿತೆ ಪ್ರಕಾರ ಪ್ರತಿಯೊಬ್ಬ ಆರೋಪಿಯು ತಲಾ ರೂ. 3 ಸಾವಿರವನ್ನು ಪರಿಹಾರ ರೂಪದಲ್ಲಿ ದೂರುದಾರಿಗೆ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Advertisement

ಘಟನೆ ಹಿನ್ನೆಲೆ
2013 ಡಿಸೆಂಬರ್‌ 15ರಂದು ಗುರುವಾಯೂರು ದರ್ಶನ ಮುಗಿಸಿ ತಡರಾತ್ರಿ ಕೊಲ್ಲೂರು ದೇವಸ್ಥಾನಕ್ಕೆ ಕೇರಳ ಸುದ್ದಿವಾಹಿನಿಯೊಂದರ ಕೆಮರಾಮನ್‌ ಶ್ಯಾಮಕುಮಾರ್‌ ಕೆ., ಅದೇ ವಾಹಿನಿಯ ಇನ್ನೋರ್ವ ಸಿಬಂದಿ ಹಾಗೂ ಅವರ ಕುಟುಂಬ ತೆರಳುತ್ತಿದ್ದರು. ಇದೇ ವೇಳೆ ಐವರ ತಂಡ ಯಾತ್ರಾರ್ಥಿಗಳ ಕಾರನ್ನು ಬೆನ್ನಟ್ಟಿ ದರೋಡೆಗೆ ಯತ್ನಿಸಿದ್ದರು. ಕೊಲ್ಲೂರು ಮಾರ್ಗವಾದ ಇಡೂರು – ಕುಂಜ್ಞಾಡಿಯ ಜನ್ನಾಲು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಸ್ವಿಫ್ಟ್‌ ಕಾರಿನಲ್ಲಿದ್ದ ಡರೋಡೆಕೋರರ ತಂಡ ಯಾತ್ರಾರ್ಥಿಗಳು ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದರು. ಆರೋಪಿಗಳು ಸ್ವಿಫ್ಟ್‌ ಕಾರಿನಿಂದಿಳಿದು ಮಾರಕಾಯುಧದಿಂದ ಕಾರಿನ ಮುಂಭಾಗದ ಗಾಜನ್ನು ಒಡೆದು ಹಾನಿ ಉಂಟು ಮಾಡಿದ್ದರು. ಈ ಸಮಯದಲ್ಲಿ ಗಾಬರಿಗೆ ಒಳಗಾಗದ ಶ್ಯಾಮಕುಮಾರ್‌ ಕಾರನ್ನು ವೇಗವಾಗಿ ಚಲಾಯಿಸಿ ಅವರಿಂದ ತಪ್ಪಿಸಿಕೊಂಡು ಮುಂದೆ ಹೋಗಿದ್ದರು. ತತ್‌ಕ್ಷಣ ಕೊಲ್ಲೂರು ಠಾಣೆಗೆ  ಮಾಹಿತಿ ನೀಡಿದ್ದರು. ಅಲ್ಲಿಂದ ವಾಪಸಾದ ದರೋಡೆಕೋರರು ಕಾರನ್ನು ವೇಗವಾಗಿ ತೆಗೆದುಕೊಂಡು ಹೋಗುವಾಗ ಚಿತ್ತೂರು ಬಳಿ ಕಾರು ಪಲ್ಟಿಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ದೂರುದಾರ ಶ್ಯಾಮಕುಮಾರ್‌ ಕೆ. ಪರವಾಗಿ ಈ ಹಿಂದೆ ಸರಕಾರಿ ಅಭಿಯೋಜಕ ಶ್ರೀನಿವಾಸ ಹೆಗ್ಡೆ  ಹಾಗೂ ಪ್ರಸ್ತುತ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ  ಸುಮಾರು ನಾಲ್ಕು ವರ್ಷಗಳಿಂದ ನ್ಯಾಯಾಲಯದಲ್ಲಿ  ಸುದೀರ್ಘ‌ ತನಿಖೆ ನಡೆದಿದ್ದು, ಐವರು ಆರೋಪಿಗಳಾದ ಮಂಗಳೂರು ವಾಮಂಜೂರಿನ ಮೂಡುಶೆಡ್ಡೆಯ ಫೈಝಲ್‌ (24), ಮಹಮದ್‌ ರಿಜ್ವಾನ್‌ (28), ಮಹಮ್ಮದ್‌ ಆಲಿ (25), ಸೈಫ‌ುದ್ದೀನ್‌ (23) ಹಾಗೂ ಮಂಗಳೂರು ಕುಲಶೇಕರ ನಿವಾಸಿ ಹರ್ಷಿತ್‌ ಶೆಟ್ಟಿ (25) ತಪ್ಪಿತಸ್ಥರೆಂದು ಸಾಬೀತಾಗಿತ್ತು.   ಈ ಪ್ರಕರಣಕ್ಕೆ  ಸಂಬಂಧಿಸಿದಂತೆ  9 ಮಂದಿಯ ಸಾಕ್ಷ್ಯಾಧಾರಗಳ ಹೇಳಿಕೆಗಳನ್ನು ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next