ಹುಣಸೂರು: ಸರಕಾರಿ ಭೂಮಿಯನ್ನು ಅಕ್ರಮ ಖಾತೆ ಮಾಡಿಕೊಟ್ಟಿರುವ ಆರೋಪದಡಿ ಹುಣಸೂರು ನಗರಸಭೆಯ ಹಿಂದಿನ ಪೌರಾಯುಕ್ತ ಹಾಗೂ ಗುಮಾಸ್ತೆಯೊಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಹುಣಸೂರು ನಗರಸಭೆ ಪೌರಾಯುಕ್ತರಾಗಿದ್ದ, ಹಾಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯಲ್ಲಿ ಸಮನ್ವಯಾಧಿಕಾರಿ ಶಿವಪ್ಪನಾಯಕ ಹಾಗೂ ಎಸ್.ಡಿ.ಎ. ಅನಿತಾ ಬಂಧಿತರ ಆರೋಪಿಗಳು.
ನಗರಸಭೆಯಲ್ಲಿ ಪೌರಾಯುಕ್ತರಾಗಿದ್ದ ವೇಳೆ ನಗರದ ಲಕ್ಷ್ಮಣತೀರ್ಥ ನದಿ ದಂಡೆಯ ಹಾಗೂ ದಾವಣಿ ಬೀದಿಗೆ ಹೊಂದಿಕೊಂಡಂತಿರುವ ಸರಕಾರಿ ಬಿ.ಕರಾಬಿನ ಖಾಲಿ ಭೂಮಿಯಲ್ಲಿ40*80 ಅಳತೆಯ ಮನೆ ನಿರ್ಮಿಸಿಕೊಂಡಿದ್ದ ಗುರುಪುರದ ರಮೇಶ್ ಹಾಗೂ ಸ್ವಾಮಿರವರಿಗೆ ನಕಲಿ ಖಾತೆದಾಖಲಾತಿ ಮಾಡಿಕೊಟ್ಟ ಆಧಾರದ ಮೇಲೆ ನೊಂದಣಿಯಾಗಿದ್ದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಕಸ್ಟಡಿಯಲ್ಲಿದ್ದ ಕಳವು ಪ್ರಕರಣದ ಆರೋಪಿ ಹಠಾತ್ ಸಾವು
ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು, ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಉಳಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ, ಸರಕಾರಿ ನಿವೇಶನಗಳಲ್ಲಿ ಅನಧಿಕೃತವಾಗಿ ಕಟ್ಟಡಗಳು ಮೇಲೇಳುತ್ತಿರುವ ಬಗ್ಗೆ ಖುದ್ದು ಶಾಸಕರೇ ಗಮನ ಸೆಳೆದಿದ್ದರು. ಸಚಿವರ ಸೂಚನೆಯಂತೆ ಕಂದಾಯ ಇಲಾಖೆಯ ಆರ್.ಐ.ನಂದೀಶ್ ನಗರ ಠಾಣೆಯಲ್ಲಿ ಅಕ್ರಮ ಖಾತೆ ಮಾಡಿದವರ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸಿ.ವಿ.ರವಿಯವರು ಶುಕ್ರವಾರದಂದು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.