ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನಡುವಿನ ಬಿಕ್ಕಟ್ಟಿಗೆ ಕೊನೆಯೇ ಇಲ್ಲವೆಂಬ ಸ್ಥಿತಿ ಈಗ ಕಂಡು ಬರುತ್ತಿದೆ.
ಸುಪ್ರೀಂ ಕೋರ್ಟಿನ ನಾಲ್ಕು ಹಿರಿಯ ಅತೃಪ್ತ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿಯ ಕಾರ್ಯವೈಖರಿಯ ಬಗೆಗಿನ ತಮ್ಮ ಅಸಮಾಧಾನವನ್ನು ಪತ್ರಿಕಾಗೋಷ್ಠಿಯ ಮೂಲಕ ಬಹಿರಂಗಪಡಿಸಿದ ನಾಲ್ಕು ದಿನಗಳ ತರುವಾಯ ಇದೀಗ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಇಂದು ಮಂಗಳವಾರ “ನ್ಯಾಯಾಂಗ ಬಿಕ್ಕಟ್ಟು ಇನ್ನೂ ಕೂಡ ಶಮನವಾಗಿಲ್ಲ’ ಎಂದು ಹೇಳಿದ್ದಾರೆ.
ಇನ್ನು ಎರಡು ಅಥವಾ ಮೂರು ದಿನಗಳ ಒಳಗೆ ನ್ಯಾಯಮೂರ್ತಿಗಳ ನಡುವಿನ ಬಿಕ್ಕಟ್ಟು ಶಮನಗೊಳ್ಳಲಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. “ನಾವೀಗ ಬಿಕ್ಕಟ್ಟು ಶಮನ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ; ಅದು ಬೇಗನೆ ಶಮನವಾಗಲಿದೆ’ ಎಂದು ಕೆ ಕೆ ವೇಣುಗೋಪಾಲ್ ಹೇಳಿದರು.
ಸುಪ್ರೀಂ ಕೋರ್ಟ್‌ನ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಕೂಡ “ಸವೋಚ್ಚ ನ್ಯಾಯಾಲಯದ ಬಿಕ್ಕಟ್ಟು ಈ ವಾರಾಂತ್ಯದೊಳಗೆ ಇತ್ಯರ್ಥವಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.
ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಇನ್ನೂ ಕೂಡ ನಾಲ್ವರು ಬಂಡುಕೋರ ನ್ಯಾಯಮೂರ್ತಿಗಳನ್ನು ಸೇರಿಸಿಕೊಳ್ಳದಿರುವುದು “ಬಿಕಟ್ಟು ಇನ್ನೂ ಬಗೆಹರಿದಿಲ್ಲ’ ಎಂಬುದಕ್ಕೆ ಸಾಕ್ಷಿಯಾಗಿದೆ. ಅತ್ಯಂತ ನಿರ್ಣಾಯಕ ಕೇಸುಗಳ ಇತ್ಯರ್ಥಕ್ಕೆ ಐವರು ಹಿರಿಯ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಕಾರ್ಯೋನ್ಮುಖವಾಗುವುದು ಅಗತ್ಯವಾಗಿದೆ.
ನ್ಯಾಯಾಂಗ ಬಿಕ್ಕಟ್ಟು ಇನ್ನೂ ಶಮನವಾಗದಿರುವ ಹಿನ್ನೆಲೆಯಲ್ಲಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಐವರು ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ ಐ ಖಾನ್‌ವಿಲ್ಕರ್, ಡಿ ವೈ ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಇದ್ದಾರೆ. ಇದರ ಅರ್ಥ ಬಂಡುಕೋರ ನಾಲ್ಕು ಹಿರಿಯ ನ್ಯಾಯಮೂರ್ತಿಗಳಿಗೆ ಸಂವಿಧಾನ ಪೀಠದಿಂದ ಖೊಕ್ ನೀಡಲಾಗಿದೆ.