Advertisement
ಹಣದ ದರ್ಪದ ಎದುರಲ್ಲಿ ಕಾನೂನು ವಿಜಯ ಪತಾಕೆ ಹಾರಿಸಿದ ವಿದ್ಯಮಾನ ಸಂಭವಿಸಿದೆ. ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ನ್ಯಾಯಾಲಯದ ನಿಂದನೆಯೆಸಗಿದ್ದಾರೆಂದು ತೀರ್ಪು ನೀಡುವ ಮೂಲಕ ಸುಪ್ರೀಂ ಕೋರ್ಟ್ ಇಂಥದೊಂದು ಸಂದೇಶವನ್ನು ಸಾರಿದೆ. ಅಂಬಾನಿ ಸಹೋದರರ ಪೈಕಿ ಕಿರಿಯರಾದ ಅನಿಲ್ ಹಾಗೂ ಇತರ ಇಬ್ಬರು, ಸ್ವೀಡಿಶ್ ಟೆಲಿಕಾಂ ಸಾಧನಗಳ ಕಂಪೆನಿಯಾದ ಎರಿಕ್‌ಸನ್ ಸಂಸ್ಥೆಗೆ ನಾಲ್ಕು ವಾರಗಳ ಒಳಗೆ 453 ಕೋ. ರೂ. ಪಾವತಿಸಬೇಕು, ಇದಕ್ಕೆ ತಪ್ಪಿದಲ್ಲಿ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ರೋಹಿಂಗ್ಟನ್ ನಾರಿಮನ್ ಹಾಗೂ ವಿನೀತ್ ಶರಣ್ ಆದೇಶ ಹೊರಡಿಸಿದ್ದಾರೆ. ಅನಿಲ್ ಅಂಬಾನಿ ಮತ್ತಿಬ್ಬರು ಆರೋಪಿಗಳ ಬೇಷರತ್ ಕ್ಷಮಾಯಾಚನೆಯ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಈ ಆರೋಪಿಗಳು ಉದ್ದಕ್ಕೂ ದುಡುಕಿನಿಂದ ವರ್ತಿಸುತ್ತಾ ಬಂದಿದ್ದಾರೆಂದು ಅಭಿಪ್ರಾಯಪಟ್ಟಿದೆ. ಕೊನೆಗೂ ಈ ನ್ಯಾಯಾಧೀಶದ್ವಯರು ದೇಶದ ಅತ್ಯಂತ ಶ್ರೀಮಂತ ಕುಟುಂಬದ ಸದಸ್ಯನನ್ನು ಕಾನೂನಿನೆದುರು ತಲೆಬಾಗುವಂತೆ ಮಾಡಿದ್ದಾರೆ.
Related Articles
Advertisement
ನಮ್ಮ ಸಮಾಜವಾದಿಗಳು ಇಂದು ಎಲ್ಲಿದ್ದಾರೆ? ನಾನು ಈ ರೀತಿ ಪ್ರಶ್ನಿಸಲು ಕಾರಣವಿದೆ. 1950ರ ದಶಕದಷ್ಟು ಹಿಂದೆಯೇ ಕೇಂದ್ರದ ಮಾಜಿ ವಿತ್ತ ಸಚಿವ ಪ್ರೊ| ಮಧು ದಂಡವತೆ ಅವರು (ಓರ್ವ ಪ್ರಾಮಾಣಿಕ ಸಮಾಜವಾದಿ ಎಂದು ಪರಿಗಣಿತರಾಗಿದ್ದವರು) ಸಿಂಧಿಯಾ ರಾಜವಂಶಕ್ಕೆ ಸೇರಿದ್ದ ಬಂಗಲೆಯೊಂದಕ್ಕೆ ಮುತ್ತಿಗೆ ಹಾಕಿಸುವ ಸಲುವಾಗಿ ಬಾಂಬೆಯ ಕೊಳೆಗೇರಿ ನಿವಾಸಿಗಳ ಜಾಥಾವನ್ನು ನಡೆಸಿದ್ದರು. ಸಮುದ್ರ ಮಹಲ್ ಎಂಬ ಈ ಬಂಗೆಲೆಯಿದ್ದುದು ಬಾಂಬೆಯ ಹಾರ್ನಿಬಿ ವೆಲ್ಲರ್ಡ್ ಪ್ರದೇಶ (ವರ್ಲಿ)ದಲ್ಲಿ. ಬಡಜನರೇ ತುಂಬಿರುವ ಭಾರತದಂಥ ದೇಶದಲ್ಲಿ ಇಂಥ ಬಂಗಲೆಗಳು ಇರಕೂಡದೆಂಬುದು ದಂಡವತೆಯವರ ವಾದವಾಗಿತ್ತು. ಅವರು ಒಯ್ದಿದ್ದ ಕೊಳೆಗೇರಿ ನಿವಾಸಿಗಳು ಬಂಗಲೆಯನ್ನು ಹಾಳುಗೆಡವಿದ್ದರು; ಮುಂದೆ ಸಿಂಧಿಯಾ ಕುಟುಂಬ ಇದನ್ನು ಭೂ ವ್ಯವಹಾರಸ್ಥನೊಬ್ಬನಿಗೆ ಮಾರಬೇಕಾಯಿತು.; ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಸಮಾಜವಾದಿಗಳಿಗೆ ಅಂಬಾನಿಯವರ ಬಂಗಲೆಯ ಬಗ್ಗೆ ಖುಷಿಯೇ ಇದೆ; ಬೆಂಗಳೂರು, ಮಂಗಳೂರು ಅಥವಾ ಇತರೆಡೆಗಳಲ್ಲಿರುವ ಸ್ವಂತ ವೈಭವೋಪೇತ ನಿವಾಸ ಕಟ್ಟಡಗಳ ಬಗೆಗೂ ಇಷ್ಟೇ ಖುಷಿಯಿದೆ.
ಸಮಾಜವಾದಿ ನಿಲುವಿನ ಸಂವಿಧಾನ ನಮ್ಮದು; ಹಾಗಾಗಿ ಸರಕಾರಿ ನೀತಿಯ ಮಾರ್ಗದರ್ಶಿ ಸೂತ್ರಗಳಿಗೆ ಕೇಂದ್ರ ಹಾಗೂ ರಾಜ್ಯಗಳಲ್ಲಿನ ನಮ್ಮ ಮಂತ್ರಿ ಮಹೋದಯರಲ್ಲಿ ಜಾಗ್ರತಿ ಮೂಡಿಸಬೇಕಾದ ಅಗತ್ಯವಿದೆ. ನಮ್ಮ ಮಂತ್ರಿಗಳ ಗಡಣ ಆರ್ಥಿಕ ವ್ಯವಸ್ಥೆಯ ನಿರ್ವಹಣೆ ಸಂಪತ್ತಿನ ಶೇಖರಣೆಗೆ ಹಾದಿ ಮಾಡಿಕೊಡ ಬಾರದೆಂಬ ಉಲ್ಲೇಖವಿರುವ ಸಂವಿಧಾನದ 39ನೇ ವಿಧಿಯನ್ನು ಇವರುಗಳು ಓದಿ ಅರ್ಥ ಮಾಡಿಕೊಂಡಿರುತ್ತಿದ್ದರೆ ನಮ್ಮ ದೇಶ “ಅಂಬಾನಿ ಮುಕ್ತ’ ರಾಷ್ಟ್ರವಾಗಿರುತ್ತಿತ್ತು! ದುರದೃಷ್ಟವಶಾತ್, ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತಿಲ್ಲ; ನೆನಪಿನಲ್ಲಿರಿಸಿಕೊಳ್ಳಬೇಕೆಂಬುದಷ್ಟೆ ಅವುಗಳ ಆಶಯವಾಗಿದೆ.
ಕೇಂದ್ರ ಸರಕಾರದ ಮೇಲೆ “ಇಂಥದೇ ನೀತಿ ರೂಪಿಸಿರಿ’- ಎಂದು, “ಬಜೆಟ್‌ನಲ್ಲಿ ಇಂತಿಂಥ ಅಂಶಗಳೇ ಇರಲಿ’ ಎಂದು ಒತ್ತಡ ಹಾಕುತ್ತಿರುವ ಅರ್ಥಾತ್ ವಶೀಲಿಬಾಜಿ ಮಾಡುತ್ತಿರುವ ನಮ್ಮ ವಾಣಿಜ್ಯೋದ್ಯಮಿಗಳ ಯಾದಿಯಲ್ಲಿ ಅಂಬಾನಿಗಳ ಹೆಸರು ಎಲ್ಲರಿಗಿಂತಲೂ ಮೇಲೆ ಇದೆ. 1990ರ ಉತ್ತರಾರ್ಧದಲ್ಲಿ ದಿವಂಗತ ಧೀರೂಭಾಯ್ ಹಾಗೂ ಬಾಂಬೆ ಡೈಯಿಂಗ್ ಹಾಗೂ ಆರ್ಕೆಮಿಲ್ಸ್‌ನ ನುಸ್ಲಿವಾಡಿಯಾ (ಮೊಹಮ್ಮದ್ ಅಲಿ ಜಿನ್ನಾರ ಮೊಮ್ಮಗ) ನಡುವೆ ನಡೆದ “ಪಾಲಿಯೆಸ್ಟರ್ ಸಮರ’ವನ್ನು ಮರೆಯುವುದು ಹೇಗೆ? ಪ್ರಬಲ ಸ್ಪರ್ಧಿ ಅಂಬಾನಿ ಅವರ ವಸ್ತ್ರೋದ್ಯಮ ಸಂಸ್ಥೆ (ಓನ್ಲಿ ವಿಮಲ್)ಯೆದುರು ವಾಡಿಯಾ ಸೋತು ಕೈ ಚೆಲ್ಲಿದರು. ಪಾಲಿಯೆಸ್ಟರ್ ಮೇಲಿನ ಕಸ್ಟಮ್ಸ್ , ಆಮದು ಸುಂಕ ದರಗಳನ್ನು ತನಗೆ ಅನುಕೂಲವಾಗುವಂತೆ “ಸರಿ ಹೊಂದಾಣಿಕೆ’ ಮಾಡಿಕೊಳ್ಳುವಲ್ಲಿ ಅಂಬಾನಿ ಯಶಸ್ವಿಯಾದರು. ಅವರಿಗೆ ಇಂದಿರಾ ಮತ್ತು ರಾಜೀವ ಗಾಂಧಿಯವರ ಪೂರ್ಣಾನು ಗ್ರಹವಿತ್ತು. ಅವರನ್ನು ಬೆಳೆಯಗೊಟ್ಟವರು, ಇತ್ತೀಚೆಗಷ್ಟೇ ಭಾರತರತ್ನ ಬಿರುದಾಂಕಿತರಾದ ಪ್ರಣವ್ ಮುಖರ್ಜಿಯವರು.
ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಹಿಂದೂ ಕೈಗಾರಿಕೋದ್ಯಮಿಗಳು ಮಹಾತ್ಮಾಗಾಂಧಿ ನೇತೃತ್ವದ ಕಾಂಗ್ರೆಸ್‌ಗೆ ಹಾಗೂ ಅವರ ಸ್ವಾತಂತ್ರ್ಯ ಚಳವಳಿಗೆ ಧನಸಹಾಯ ನೀಡಿದ್ದರು. ಸ್ವಾತಂತ್ರ್ಯದ ಬಳಿಕ ಅವರು ಇದರ ಧಾರಾಳ ಪ್ರಯೋಜನವನ್ನು ದಕ್ಕಿಸಿಕೊಂಡರು. ಅಂಬಾನಿಗಳು ಮತ್ತಿತರರು ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಧನ ಸಹಾಯ ನೀಡುತ್ತ, ಬ್ಯಾಂಕುಗಳ ಹಣವನ್ನು ಬಾಚುತ್ತ, ತಮ್ಮ ಸಂಪತ್ತನ್ನು ವಿದೇಶಿ ಬ್ಯಾಂಕುಗಳಲ್ಲಿ ಇರಿಸುತ್ತ ಬಂದಿರುವವರ ಪೀಳಿಗೆಯವರು. “ಉದ್ಯಮರಂಗದ ಸಾಮಾಜಿಕ ಹೊಣೆ’ಯ ಹೆಸರಿನಲ್ಲಿ ಇವರುಗಳು ಸಾರ್ವಜನಿಕ ದಾನದತ್ತಿಗಳನ್ನು ಮಾಡುತ್ತ ಬಂದಿದ್ದಾರೆ ಅಷ್ಟೆ. ಇದೀಗ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಕಂಪೆನಿಯನ್ನು ರಫೇಲ್ ವಿಮಾನ ಕಂಪೆನಿಯ ಭಾಗೀದಾರ ಕಂಪೆನಿಯನ್ನಾಗಿಸಲು ಹೊರಟಿರುವ ತನ್ನ ನಿರ್ಧಾರವನ್ನು ಮೋದಿ ಸರಕಾರ ಮರುಪರಿಶೀಲಿಸಬೇಕಿದೆ.