ಭೋಪಾಲ್: ವಿಷಯುಕ್ತ ಚಪಾತಿ ಸೇವಿಸಿದ ನ್ಯಾಯಾಧೀಶರು ಮತ್ತು ಅವರ ಹಿರಿಯ ಪುತ್ರ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂತ್ರವಾದಿ, ಮಹಿಳೆ ಸೇರಿದಂತೆ ಆರು ಮಂದಿಯನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಚಪಾತಿ ಸೇವಿಸಿದ ಎರಡು ದಿನದ ನಂತರ ಜಿಲ್ಲಾ ಹೆಚ್ಚುವರಿ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಬೇತುಲ್ ಮಹೇಂದ್ರ ತ್ರಿಪಾಠಿ ಹಾಗೂ 33 ವರ್ಷದ ಪುತ್ರ ಭಾನುವಾರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಛಿಂದ್ವಾರದಲ್ಲಿ ಎನ್ ಜಿಒ ನಡೆಸುತ್ತಿದ್ದ ಸಂಧ್ಯಾ ಸಿಂಗ್ ಎಂಬ ಮಹಿಳೆ ನ್ಯಾಯಾಧೀಶರ ಕುಟುಂಬಕ್ಕೆ ವಿಷ ಮಿಶ್ರಿತ ಚಪಾತಿ ಹಿಟ್ಟನ್ನು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಮ್ಮ ಮನೆಯಲ್ಲಿ ಶಾಂತಿ ನೆಲೆಸಲಿ ಎಂದು ಪೂಜೆ ಮಾಡಿಸಿದ್ದು, ಅದರ ಪ್ರಸಾದ ಎಂದು ಸುಳ್ಳು ಹೇಳಿ ವಿಷ ಮಿಶ್ರಿತ ಚಪಾತಿ ಹಿಟ್ಟನ್ನು ನ್ಯಾಯಾಧೀಶರ ಕುಟುಂಬಕ್ಕೆ ಸಿಂಗ್ ನೀಡಿದ್ದಳು.
ಜುಲೈ 20ರಂದು ಚಪಾತಿ ಹಿಟ್ಟನ್ನು ಮನೆಗೆ ತಂದಿದ್ದರು. ಅದೇ ದಿನ ಚಪಾತಿಯನ್ನು ಮಾಡಿದ್ದರು. ಪೊಲೀಸರ ಹೇಳಿಕೆ ಪ್ರಕಾರ, ನ್ಯಾಯಾಧೀಶರು ಮತ್ತು ಇಬ್ಬರು ಮಕ್ಕಳು ಚಪಾತಿ ಸೇವಿಸಿದ್ದರು. ಆದರೆ ಪತ್ನಿ ಮಾತ್ರ ಊಟ ಮಾಡಿದ್ದರು. ಎರಡು ದಿನದ ನಂತರ ನ್ಯಾಯಾಧೀಶರು ಮತ್ತು ಹಿರಿಯ ಮಗ ವಾಂತಿ ಮಾಡಲು ಆರಂಭಿಸಿದ್ದರು. ಜುಲೈ 23ರಂದು ಇಬ್ಬರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದರು.
ಜುಲೈ 25ರಂದು ಇಬ್ಬರನ್ನೂ ನಾಗ್ಪುರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಏತನ್ಮಧ್ಯೆ ನಾಗ್ಪುರ್ ತಲುಪುತ್ತಿದ್ದಂತೆಯೇ ನ್ಯಾಯಾಧೀಶರ ಮಗ ಸಾವನ್ನಪ್ಪಿದ್ದ. ಒಂದು ದಿನದ ನಂತರ ನ್ಯಾಯಾಧೀಶ ತ್ರಿಪಾಠಿಯವರೂ ನಿಧನರಾಗಿರುವುದಾಗಿ ವರದಿ ವಿವರಿಸಿದೆ.
ನ್ಯಾಯಾಧೀಶರ ಕಿರಿಯ ಮಗ ಆಶೀಶ್ ಕೂಡಾ ಚಪಾತಿ ತಿಂದ ನಂತರ ಅನಾರೋಗ್ಯಕ್ಕೆ ಒಳಗಾಗಿದ್ದ, ಆದರೆ ಆತ ಚಿಕಿತ್ಸೆಯ ಬಳಿಕ ತರಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಛಿಂದ್ವಾರದಲ್ಲಿ ನ್ಯಾಯಾಧೀಶರು ಪೋಸ್ಟಿಂಗ್ ಆದ ಮೇಲೆ ಸಂಧ್ಯಾಗೂ ಪರಿಚಯವಾಗಿತ್ತು. ಆದರೆ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂಬ ಅಸಮಾಧಾನಕ್ಕೆ ಸಂಧ್ಯಾ ನ್ಯಾಯಾಧೀಶರು ಮತ್ತು ಅವರ ಕುಟುಂಬವನ್ನು ಗುರಿಯಾಗಿರಿಸಿ ಹತ್ಯೆಯ ಸಂಚು ರೂಪಿಸಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿಮಾಲಾ ಪ್ರಸಾದ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲು ಸಂಧ್ಯಾ ಸಿಂಗ್ ಳನ್ನು ಬಂಧಿಸಿದ್ದರು. ನಂತರ ಆಕೆಯ ವಾಹನ ಚಾಲಕ ಸಂಜು ವನ್ನು ಬಂಧಿಸಿದ್ದರು. ತನಿಖೆಯ ಬಳಿಕ ಮತ್ತೆ ಮೂವರನ್ನು ಬಂಧಿಸಲಾಗಿತ್ತು. ಓಡಿ ಹೋಗಲು ಯತ್ನಿಸಿದ್ದ ಮಂತ್ರವಾದಿಯನ್ನೂ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.