ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ಕುಟುಂಬ ಸಮೇತ ಸೋಮವಾರ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಹಂಪಿ ಸ್ಮಾರಕ, ಕಲಾಕೃತಿಗಳಿಗೆ ಮನಸೋತರು. ಹೊಸಪೇಟೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾನುವಾರ ಭಾಗವಹಿಸಿದ್ದ ಜೆಪಿ ನಡ್ಡಾ ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯೊಂದಿಗೆ ಹಂಪಿಗೆ ಭೇಟಿ ನೀಡಿ ಸ್ಮಾರಕಗಳ ವೀಕ್ಷಣೆ ಮಾಡಿದರು.
ಹಂಪಿ ಸೊಬಗು, ಸ್ಮಾರಕಗಳ ಕಲಾವೈಭವ, ಸಾಲು ಕಂಬಗಳು, ಸಾವಿರಾರೂ ಸ್ಮಾರಕಗಳು ನೋಡುವುದೇ ಕಣ್ಣಿಗೆ ಹಬ್ಬ. ಅಂತಹ ಐತಿಹಾಸಿಕ ವಿಶ್ವ ವಿಖ್ಯಾತ ಹಂಪಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕುಟುಂಬ ಹಂಪಿ ಸ್ಮಾರಕದ ಶಿಲ್ಪ ಕಲಾ ವೈಭವ ಕಂಡು ಬೆರಗಾದರು. ಬೆಳ್ಳಂಬೆಳಗ್ಗೆ ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಆಗಮಿಸಿದ ನಡ್ಡಾ ಮತ್ತು ಅವರ ಕುಟುಂಬವನ್ನು ವಿರೂಪಾಕ್ಷೇಶ್ವರ ದೇಗುಲದ ಆನೆ ಮಾರ್ಲಾಪಣೆ ಮಾಡಿ ಸ್ವಾಗತಿಸಿತು. ಕುಟುಂಬ ಸಮೇತರಾಗಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕರ ಬಳಿ ವಿರೂಪಾಕ್ಷೇಶ್ವರನಿಗೆ ಶ್ರೀ ಕೃಷ್ಣ ದೇವರಾಯ ಅರ್ಪಿಸಿದ ಬಂಗಾರದ ಮುಖವಾಡದ ಹಾಗೂ ದೇವಾಲಯದ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಉದ್ಧಾನ ವೀರಭದ್ರೇಶ್ವರ, ಉಗ್ರ ನಾರಸಿಂಹ, ಕಡಲೆಕಾಳು ಗಣಪ, ಸಾಸಿವೆ ಕಾಳು ಗಣಪ, ಲೋಟಸ್ ಮಹಲ್, ಮಹಾನವಮಿ ದಿಬ್ಬ ವೀಕ್ಷಣೆ ಮಾಡಿದರು. ನಂತರ ಹಂಪಿ ಐತಿಹಾಸಿಕ ವಿಜಯ ವಿಠಲ ದೇಗುಲದಲ್ಲಿನ ಕಲ್ಲಿನ ತೇರು ವೀಕ್ಷಣೆ ಮಾಡಿದರು. ಈ ವೇಳೆ 50 ರೂ. ನೋಟಿನಲ್ಲಿರುವ ಕಲ್ಲಿನ ತೇರಿನ ಭಾವಚಿತ್ರ ನೋಡಿ ಬೆರಗಾದ ನಡ್ಡಾ, ನೋಟಿನೊಂದಿಗೆ ಕಲ್ಲಿನ ರಥದ ಫೋಟೋ ತೆಗೆಸಿಕೊಂಡರು.ಸಪ್ತಸ್ವರಗಳ ಕಂಬಗಳ ನಿನಾದ ಆಲಿಸಿದ ನಡ್ಡಾ ಹಾಗೂ ಕುಟುಂಬಸ್ಥರೂ ಕಿವಿಗೊಟ್ಟು ಸ್ವರ ಆಲಿಸಿದರು.
ಉಭಯ ಕುಶಲೋಪರಿ: ಪ್ರವಾಸಿಗರು, ಸ್ಥಳೀಯರು, ಬಿಜೆಪಿ ಕಾರ್ಯಕರ್ತರೊಂದಿಗೆ ನಗುಮೊಗದಿಂದಲೇ ಫೋಟೋ ತೆಗೆಸಿಕೊಂಡರು. ಹಂಪಿ ಸ್ಮಾರಕಗಳ ವೀಕ್ಷಣೆ ವೇಳೆ ನಡ್ಡಾ ಪತ್ನಿ. ಸೊಸೆ, ಪುತ್ರರಿಬ್ಬರೂ ಸ್ಮಾರಕಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಜೀ ಇದ್ದರು.
ಐತಿಹಾಸಿಕ ದೃಷ್ಟಿಯಿಂದ ನಮ್ಮ ಜನ, ಋಷಿಮುನಿಗಳು ಎಷ್ಟೊಂದು ಜ್ಞಾನಿ, ಮಾಹಿತಿಯುಳ್ಳವರು ಎಂದು ತಿಳಿಯಬಹುದು. ಹಂಪಿಯನ್ನು ಯುನೆಸ್ಕೂ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ನಮ್ಮ ಹೆಮ್ಮೆ ಸಂಗತಿ. ಹಂಪಿ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ