ಚಿಕ್ಕಬಳ್ಳಾಪುರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಕ್ರೆಡಿಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಮಹಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸಿ ಮಾ.15 ರೊಳಗೆ ಎಲ್ಲವೂ ಸರಿ ಹೋಗದೇ ಇದ್ದರೆ ಕಠಿಣ ಶಿಸ್ತುವಾದ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯ ನಿರ್ಲಕ್ಷ್ಯ ತೋರಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಕಾಲದಲ್ಲಿ ನಿರ್ಮಿಸದೇ ಹೋದರೆ ನಷ್ಟವಾಗುವ ಹಣವನ್ನು ಅಧಿಕಾರಿಗಳಿಂದ ವಸೂಲಿ ಮಾಡಲಾಗುವುದು. ಬೇಸಿಗೆ ಆರಂಭ ಗೊಳ್ಳುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
52 ಶುದ್ಧ ನೀರಿನ ಘಟಕಗಳು ರಿಪೇರಿ: ಜಿಲ್ಲೆಯಲ್ಲಿ 52 ಶುದ್ಧ ನೀರಿನ ಘಟಕಗಳು ರಿಪೇರಿ ಆಗಬೇಕೆಂಬ ಅಧಿಕಾರಿಗಳ ಮಾಹಿತಿ ಕೇಳಿ ಗರಂ ಆದ ಅಧ್ಯಕ್ಷರು, ಜನರಿಗೆ ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ. ಅದನ್ನು ಅಧಿಕಾರಿಗಳ ಗಂಭೀರವಾಗಿ ನಿರ್ವಹಿಸಬೇಕು, ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಶುದ್ಧ ನೀರಿನ ಘಟಕಗಳು ಕೆಲವು ಕಡೆ ಸ್ಥಗಿತಗೊಂಡಿವೆ. ಕೆಲವು ಕಡೆ ಮುಳ್ಳಿನ ಗಿಡಗಳು ಬೆಳೆದಿವೆ. ರಿಪೇರಿಗೆ ಬಂದಿದ್ದರೂ ದುರಸ್ತಿ ಕಂಡಿಲ್ಲ. ಕೆಲವು ಗ್ರಾಮಗಳಲ್ಲಿ ನೀರಿಗೆ ತೀವ್ರ ಸಮಸ್ಯೆ ಇದೆ. ಹತ್ತಾರು ಕಿ.ಮೀ ಹೋಗಿ ನೀರು ತರುವಂತಾಗಿದೆ. ಇರುವುದನ್ನು ಸಮರ್ಪಕವಾಗಿ ಬಳಸಕ್ಕೆ ಆಗಲಿಲ್ಲ ಅಂದರೆ ಹೇಗೆ, ಮಾ.15 ರೊಳಗೆ ಶುದ್ಧ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಬಾಕಿ ಇರುವುದನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಿರ್ಲಕ್ಷ್ಯ ವಹಿಸಿದರೆ ಶಿಸ್ತುಕ್ರಮ: ಯಾರೇ ಈ ಬಗ್ಗೆ ನಿರ್ಲಕ್ಷ್ಯ ತೋರಿದರೂ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದರು. ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಲ್ಲಿ ನೀರಿನ ಸಮಸ್ಯೆ ಇದೆ. ಆದರೆ ಶಿಡ್ಲಘಟ್ಟ ತಾಲೂಕನ್ನು ಬರದ ಪಟ್ಟಿಗೆ ಸೇರಿಸದೇ ಇರುವುದಕ್ಕ ಜಿಪಂ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿ ಕೂಡಲೇ ಕೃಷಿ ಅಧಿಕಾರಿಗಳು ಶಿಡ್ಲಘಟ್ಟ ತಾಲೂಕನ್ನು ಬರದ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದರು.
ಕೆರೆಗಳ ಅಭಿವೃದ್ಧಿಗೆ ಒತ್ತು ಕೊಡಿ: ಜಲಾಮೃತ ಯೋಜನೆಯಡಿ 33 ಕೆರೆಗಳ ಅಭಿವೃದ್ಧಿಗೆ ಅನುಮೋದನೆ ಸಿಕ್ಕರೂ ಹೂಳು ಎತ್ತುವ ಕಾಮಗಾರಿ ಆರಂಭ ಗೊಳ್ಳದ ಬಗ್ಗೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಬೇಸರ ವ್ಯಕ್ತಪಡಿಸಿದರು. ಕೂಡಲೇ ಕಾಮಗಾರಿ ನಡೆಸಬೇಕು. ಸಿಇಒ ನೀರು ಇರುವ ಕೆರೆಗಳನ್ನು ಹೊರತುಪಡಿಸಿ ಉಳಿದ ಕೆರೆಗಳಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಿದರು. ಇದೇ ವೇಳೆ ಫೆ.15 ಹಾಗೂ 16 ರಂದು ಎರಡು ದಿನಗಳ ಕಾಲ ಸರ್ ಎಂ.ವಿಶೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕುಟುಂಬ ಸಮೇತರಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ, ಆರೋಗ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಹಲವು ಸಲಹೆ ಸೂಚನೆಗಳನ್ನು ನೀಡಲಾಯಿತು. ಜಿಪಂ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ಸಿಇಒ ಬಿ. ಫೌಜಿಯಾ ತರನ್ನುಮ್, ಮುಖ್ಯ ಯೋಜನಾಧಿಕಾರಿ ಮಾಧುವ್‌ರಾಮ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 75 ಗ್ರಾಮಗಳಲ್ಲಿ ನೀರಿಗೆ ಬರ..: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಬೆಳೆಯತೊಡಗಿದ್ದು, ಒಟ್ಟಾರೆ ಜಿಲ್ಲೆಯ 75 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮಗಳಲ್ಲಿ ಕೊಳವೆ ಬಾವಿಗಳು ಕೊರೆದರೂ ನೀರು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 17 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 58 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ದಿನ 43 ಟ್ಯಾಂಕರ್‌ಗಳ ನೀರು ಸರಬರಾಜು ಮಾಡಲಾಗುತ್ತಿದೆಯೆಂದು ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ತಿಳಿಸಿದರು.
ಸರ್ಕಾರ ಜಿಲ್ಲೆಗೆ ಹೆಚ್ಚುವರಿಯಾಗಿ ಯಾವುದೇ ಅನುದಾನ ಕೊಡುತ್ತಿಲ್ಲ. ನಾವು ಅನುದಾನ ಕೋರಿ ಸುತ್ತಾಡಿ ನಮ್ಮ ಚಪ್ಪಲಿಗಳೇ ಸವಿದು ಹೋಗುತ್ತಿವೆ. ಇರುವ ಅನುದಾನವನ್ನು ಅಧಿಕಾರಿಗಳು ಸರ್ಕಾರಕ್ಕೆ ವಾಪಸ್ಸು ಹೋಗದಂತೆ ಸಮರ್ಪಕವಾಗಿ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕು, ವಿಳಂಭ, ಕರ್ತವ್ಯ ಲೋಪದಿಂದ ಸರ್ಕಾರಕ್ಕೆ ಅನುದಾನ ವಾಪಸ್ಸು ಹೋದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
-ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷ