ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳ ಜನರಿಗೂ ಜ್ಯೋತಿಷ್ಯದ ಮೇಲೆ ಆಸಕ್ತಿ ಹೆಚ್ಚಾಗಿದ್ದು, ಜ್ಯೋತಿಷಿಗಳನ್ನು ಭೇಟಿ ಮಾಡಿದ ನಂತರವೇ ಪ್ರತಿಯೊಂದು ಕೆಲಸ ಆರಂಭಿಸುತ್ತಾರೆ ಎಂದು ರಾಜವಂಶಸ್ಥೆ ಡಾ. ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಶ್ರೀ ಮಾಯಾಕಾರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಆಯೋಜಿಸಿದ್ದ ಮಾಯಾಕಾರ ಗುರುಕುಲದ 5ನೇ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತಿಯ ಮೂಲ ಸಂಸ್ಕೃತವಾಗಿದ್ದು, ಎಲ್ಲದಕ್ಕೂ ಜ್ಯೋತಿಷ್ಯವೇ ಮೂಲವಾಗಿದೆ. ಈಗಿನ ಮಂದಿಗೆ ಜ್ಯೋತಿಷ್ಯದ ಮೇಲೆ ಆಸಕ್ತಿ ಹೆಚ್ಚಾಗಿದ್ದು, ಯಾವ ಸಮಯದಲ್ಲಿ ಹಾಲ್ ಟಿಕೆಟ್ ತೆಗೆದುಕೊಳ್ಳಬೇಕು? ಯಾವ ಸಮಯದಲ್ಲಿ ಪರೀಕ್ಷೆಗೆ ಹೋಗಬೇಕೆಂದು ಜ್ಯೋತಿಷಿಗಳನ್ನು ಕೇಳುವಷ್ಟು ಮಟ್ಟಿಗೆ ಜ್ಯೋತಿಷ್ಯದ ಬಗ್ಗೆ ನಂಬಿಕೆ ಹೊಂದಿದ್ದಾರೆ.
ಆದರೆ, ಇತ್ತೀಚಿಗೆ ಕೆಲವು ಜ್ಯೋತಿಷ್ಯರಲ್ಲಿ ಪ್ರಖರತೆ ಕಾಣಿಸುತ್ತಿಲ್ಲ ಎಂದ ಅವರು, ಈ ಸಂಸ್ಥೆ ವತಿಯಿಂದ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಜ್ಯೋತಿಷ್ಯವನ್ನು ಕರಗತ ಮಾಡಿಕೊಳ್ಳಲಿ ಎಂದು ಹಾರೈಸಿದರು. ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಭಾಸ್ಕರಭಟ್ಟ ಜೋಶಿ ಮಾತನಾಡಿ, ಜ್ಯೋತಿಷ್ಯಕ್ಕೆ ಅಧ್ಯಯನದ ಜತೆಗೆ ಆಚರಣೆ ಹಾಗೂ ವಿಧಿವಿಧಾನಗಳನ್ನು ಪಾಲಿಸುವುದು ಸಹ ಮುಖ್ಯವಾಗಲಿದೆ.
ಹೀಗಾಗಿ ಆಚರಣೆ ಜತೆಗೆ ಸಭ್ಯತೆಯೊಂದಿಗೆ ವಿದ್ಯಾರ್ಥಿಗಳು ಜ್ಞಾನವನ್ನು ಹಿಡಿದರೆ ಮಾತ್ರ ಜ್ಯೋತಿಷ್ಯ ಪರಂಪರೆಯನ್ನು ಮುಂದುವರಿಯಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ಪಾಲ್ಗೊಂಡು, ಅಚ್ಚುಕಟ್ಟಾಗಿ ಅಧ್ಯಯನ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಜ್ಯೋತಿಷ್ಯಶಾಸ್ತ್ರದ ಡಿಪ್ಲೊಮಾ ಪಡೆದ ನೂರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಕರ್ತ ಡಾ.ಸಿದ್ದಾಂತಿ ಕೆ.ಜಿ.ಪುಟ್ಟಹೊನ್ನಯ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಯೋಜನಾ ಸಹಾಯಕ ಗಿರೀಶ್ ಭಟ್, ಮಾಯಾಕಾರ ಗುರುಕುಲದ ಡಾ.ಮೂಗೂರು ಮಧುದೀಕ್ಷಿತ್ ಹಾಜರಿದ್ದರು.