ನವದೆಹಲಿ: ಚೀನಾದ ಹಣಕಾಸು ನೆರವು, ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಕ್ಲಿಕ್ ಮಾಧ್ಯಮದ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ( UAPA)ಯಡಿ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ನ್ಯೂಸ್ ಕ್ಲಿಕ್ ಗೆ ಸಂಬಂಧಿಸಿದ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Bollywood: ಮೂರನೇ ಬಾರಿ ರಿಲೀಸ್ ಡೇಟ್ ಬದಲಾಯಿಸಿದ ʼಮೇರಿ ಕ್ರಿಸ್ಮಸ್ʼ; ಇಲ್ಲಿದೆ ಕಾರಣ
ಚೀನಾ ಪರ ಸುದ್ದಿಯನ್ನು ಪ್ರಸಾರ ಮಾಡುವ ಉದ್ದೇಶದಿಂದ ನ್ಯೂಸ್ ಕ್ಲಿಕ್ ಚೀನಾದಿಂದ ಹಣ ಪಡೆದಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ನ ತನಿಖಾ ವರದಿ ಬಹಿರಂಗಗೊಳಿಸಿತ್ತು. ಬಳಿಕ ಆಗಸ್ಟ್ 17ರಂದು ದೆಹಲಿ ಪೊಲೀಸರು ನ್ಯೂಸ್ ಕ್ಲಿಕ್ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಮಂಗಳವಾರ (ಅಕ್ಟೋಬರ್ 03) ದೆಹಲಿ ಮತ್ತು ಎನ್ ಸಿಆರ್ ನಲ್ಲಿ ನ್ಯೂಸ್ ಕ್ಲಿಕ್ ನ ಪತ್ರಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಮೂಲಗಳ ಪ್ರಕಾರ, ಕೆಲವು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಇದಕ್ಕೂ ಮೊದಲು ಚೀನಾ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನ್ಯೂಸ್ ಕ್ಲಿಕ್ ವಿರುದ್ಧ ತನಿಖೆ ನಡೆಸಿ ದೂರು ದಾಖಲಿಸಿತ್ತು. ನಂತರ ನ್ಯೂಸ್ ಪೋರ್ಟಲ್ ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ವರದಿ ವಿವರಿಸಿದೆ.