Advertisement

ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು

11:00 AM Jan 03, 2018 | Team Udayavani |

ಬೆಂಗಳೂರು: “ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು. ಅವರ ಆಲೋ ಚನೆಗಳು ಲೇಪಿತವಾಗಿರಬಾರದು’ -ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಮಾಧ್ಯಮಕ್ಕೆ ಹೇಳಿದ ಕಿವಿಮಾತು ಇದು. ಮಂಗಳವಾರ “ಉದಯವಾಣಿ’ ಪತ್ರಿಕೆಯ ಬೆಂಗಳೂರು ಕಚೇರಿಗೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಅವರು, ಮಾಹಿತಿ ತಂತ್ರಜ್ಞಾನದ ಭರಾಟೆಯಲ್ಲಿ ತೇಲಿ ಬರುವ ಊಹಾಪೋಹಗಳಿಗೆ ಕಡಿವಾಣ ಹಾಕುವ ಮೊದಲೇ
ಅದರಿಂದಾಗುವ ನಷ್ಟ ಸಂಭವಿಸಿ ಬಿಟ್ಟಿರುತ್ತದೆ ಎಂದರು. ಹಾಗಾಗಿ ಪತ್ರಕರ್ತರ ಮನಸ್ಸು ತಟಸ್ಥವಾಗಿರಬೇಕು ಮತ್ತು ಅವರ ಆಲೋಚನೆಗಳು ಲೇಪಿತವಾಗಿರಬಾರದು ಎಂದರು.

Advertisement

ತಂತ್ರಜ್ಞಾನದ ಬೆಳವಣಿಗೆ ನಂತರ ಮಾಹಿತಿ ಮತ್ತು ಜ್ಞಾನದ ಮೇಲಿನ ನಿಯಂತ್ರಣ ತಪ್ಪಿ ಹೋಗಿದೆ. ನಿಜ ಯಾವುದು ಸುಳ್ಳು ಯಾವುದು ಎಂದು ಪೊಲೀಸರು ಮತ್ತು ಸರ್ಕಾರಕ್ಕೆ ತೀರ್ಮಾನಿಸುವುದು ಕಷ್ಟವಾಗಿ ಬಿಡುತ್ತದೆ. ಹಾಗಾಗಿ, ಸಮಾಜಕ್ಕಾಗಿ ಪತ್ರಕರ್ತರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ವೇದಗಳ ಕಾಲದಲ್ಲಿ ಮಾಹಿತಿ ಮತ್ತು ಜ್ಞಾನ ಮೌಖೀಕವಾಗಿ ಪಸರಿಸಲ್ಪಡುತ್ತಿತ್ತು. ಆಗ ಅದರ ವ್ಯಾಪ್ತಿ ತುಂಬಾ ಕಡಿಮೆ ಆಗಿತ್ತು. ಮುದ್ರಣ ಮಾಧ್ಯಮ ಬಂದಾಗ ವ್ಯಾಪ್ತಿ ವಿಸ್ತಾರಗೊಂಡಿತು. ಆದರೆ, ಎಂಭತ್ತರ ದಶಕದಲ್ಲಿ ಇಂಟರ್‌ನೆಟ್‌ ಬಂದ ಬಳಿಕ ಪುಸ್ತಕದಲ್ಲಿದ್ದ ಮಾಹಿತಿ ಗಾಳಿಯಲ್ಲಿ ತೇಲಾಡಲಾರಂಭಿಸಿದೆ. ಏಳು ಸಾವಿರ ವರ್ಷಗಳಲ್ಲಿ ಗಳಿಸಿರುವ ಮಾಹಿತಿ ಇಂದು ಗಾಳಿಯಲ್ಲಿ ಸಿಗುತ್ತದೆ. ಒಂದು ಚಿಕ್ಕ ಮೊಬೈಲ್‌ ಇದ್ದರೆ ಸಾಕು, ಅದನ್ನು ನಾವು ನಮ್ಮದಾಗಿಸಿಕೊಳ್ಳಬಹುದು
ಎಂದು ಅವರು ತಂತ್ರಜ್ಞಾನದ ಬೆಳವಣಿಗೆಯನ್ನು ವಿವರಿಸಿದರು.

ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಹೆಚ್ಚು. ಟಿವಿ, ಇಂಟರ್‌ ನೆಟ್‌, ಫೇಸ್‌ಬುಕ್‌ ಇವೆಲ್ಲ ವೀಕ್ಷಕರ ನಿಯಂತ್ರಣದಲ್ಲಿಲ್ಲ. ಆದರೆ, ಮುದ್ರಣ ಮಾಧ್ಯಮ ಓದುಗರ ನಿಯಂತ್ರಣ  ದಲ್ಲಿದೆ. ಓದುಗರಿಗೆ ಮುದ್ರಣ ಮಾಧ್ಯಮ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ನೀಡುತ್ತದೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ಬಿ. ದಿನೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next