ಲಕ್ನೋ: ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಎರಡು ವರ್ಷಗಳ ನಂತರ ಗುರುವಾರ ಲಕ್ನೋ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಿಕ್ ಕಪ್ಪನ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಪ್ರಕರಣ ದಾಖಲಿಸಿತ್ತು. ಇಲ್ಲಿನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಶ್ಯೂರಿಟಿ ಸಲ್ಲಿಕೆಗೆ ಸಂಬಂಧಿಸಿದ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಕಪ್ಪನ್ ಲಕ್ನೋ ಜೈಲಿನಿಂದ ಹೊರ ಬಂದರು.
ಇದನ್ನೂ ಓದಿ:15 ದಿನಗಳ ಅಂತರ; ಸಾವಿನಲ್ಲಿ ಒಂದಾದ ರೈತ ಸಂಘದ ಸ್ನೇಹಿತರು
“ನಾನು 28 ತಿಂಗಳ ನಂತರ ಜೈಲಿನಿಂದ ಹೊರಬಂದಿದ್ದೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹಾಕಲಾಗಿದೆ. ಈಗ ಹೊರಬರಲು ನನಗೆ ಸಂತೋಷವಾಗಿದೆ” ಎಂದು ಕೇರಳದ ಪತ್ರಕರ್ತ ಸಿದ್ದಿಕ್ ಅವರು ಸುದ್ದಿ ಸಂಸ್ಥೆ ಎಎನ್ ಐ ಗೆ ಹೇಳಿದ್ದಾರೆ.
2020ರ ಅಕ್ಟೋಬರ್ ನಲ್ಲಿ ಹತ್ರಾಸ್ ನಲ್ಲಿ ನಡೆದಿದ್ದ ದಲಿತ ಮಹಿಳೆಯ ಸಾವಿನ ಸಂದರ್ಭದಲ್ಲಿ ಕಪ್ಪನ್ ಮತ್ತು ಇತರ ಮೂವರನ್ನು ಬಂಧಿಸಲಾಗಿತ್ತು. ಕಪ್ಪನ್ ಮತ್ತು ಇತರ ಮೂವರು ಹತ್ರಾಸ್ ಮಹಿಳೆಯ ಸಾವಿನ ಮೇಲೆ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿತ್ತು.