ನವದೆಹಲಿ:ಕೇರಳದ ಪತ್ರಕರ್ತ ಸಿದ್ದಿಖಿ ಕಪ್ಪನ್ ಗೆ ಸುಪ್ರೀಂಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 09) ಜಾಮೀನು ನೀಡಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ರಣಬೀರ್ ‘ಬ್ರಹ್ಮಾಸ್ತ್ರ’ ರಿವೀವ್: ವಿಎಫ್ ಎಕ್ಸ್ ಹೆಸರಲ್ಲಿ ‘ಲೇಸರ್ ಶೋ’ ಎಂದ ಜನ
2020ರಲ್ಲಿ ಉತ್ತರಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ವರದಿ ಮಾಡಲು ತೆರಳುತ್ತಿದ್ದ ಪತ್ರಕರ್ತ ಸಿದ್ದಿಖಿ ಕಪ್ಪನ್ ಅವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. 2020ರಿಂದ ಸಿದ್ದಿಖಿ ಜೈಲಿನಲ್ಲಿದ್ದು, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮುಂದಿನ ಆರು ವಾರಗಳ ಕಾಲ ಸಿದ್ದಿಖಿ ದೆಹಲಿ ಪೊಲೀಸರ ಸಮ್ಮುಖದಲ್ಲಿ ಹಾಜರಾಗಬೇಕು ನಂತರ ಕೇರಳ ಪೊಲೀಸರ ಸಮ್ಮುಖದಲ್ಲಿ ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಸಿಜೆಐ ಯುಯು ಲಿಲಿತ್ ಆದೇಶದಲ್ಲಿ ತಿಳಿಸಿದ್ದಾರೆ.
ಹತ್ರಾಸ್ ನಲ್ಲಿ ಸಿದ್ದಿಖಿ ಕಾನೂನು ಸುವ್ಯವಸ್ಥೆ ಹಾಳುಗೆಡವಲು ಪ್ರಯತ್ನಿಸಿದ್ದು, ಈ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದೆಂದು ಉತ್ತರಪ್ರದೇಶ ಸರ್ಕಾರ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿದ್ದರಿಂದ ಈ ಮೊದಲು ಸಿದ್ದಿಖಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಮಲಯಾಳಂ ನ್ಯೂಸ್ ಪೋರ್ಟಲ್ ಪತ್ರಕರ್ತ ಸಿದ್ದಿಖಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜತೆ ಸಂಪರ್ಕ ಇದ್ದಿರುವುದಾಗಿ ಪೊಲೀಸರು ಆರೋಪಿಸಿದ್ದರು. ಸಿದ್ದಿಖಿ ಹತ್ರಾಸ್ ನಲ್ಲಿ ಗಲಭೆ ಸೃಷ್ಟಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲ ಪಿಎಫ್ ಐನಂತಹ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು, ಜಾಮೀನು ನೀಡಬಾರದೆಂದು ಉತ್ತರಪ್ರದೇಶ ಸರ್ಕಾರದ ಪರ ವಕೀಲರಾದ ಮಹೇಶ್ ಜೇಠ್ಮಲಾನಿ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.