ಅಂಕಾರ: ಸೌದಿ ಅರೇಬಿಯಾದ ರಾಜಮನೆ ತನದ ವಿರೋಧಿ ಮತ್ತು ಅಮೆರಿಕ ವಾಸಿಯಾಗಿದ್ದ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನು ಚಿತ್ರಹಿಂಸೆ ಕೊಟ್ಟು ಶಿರಚ್ಛೇದನ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಟರ್ಕಿಯ ಸರಕಾರಿ ಮೂಲದ ಪತ್ರಿಕೆ ಯೇನಿ ಸಫಕ್ ಈ ಬಗ್ಗೆ ವರದಿ ಮಾಡಿದ್ದು, ಹತ್ಯೆಗೂ ಮುನ್ನ ಬೆರಳುಗಳನ್ನು ಕತ್ತರಿಸ ಲಾಗಿದೆ ಎಂದು ಹೇಳಿದೆ. ಈ ಸಂಬಂಧ ಹಲವಾರು ಆಡಿಯೋ ರೆಕಾರ್ಡಿಂಗ್ ಫೈಲ್‌ಗಳು ತನ್ನ ಬಳಿ ಇವೆ ಎಂದು ಅದು ವರದಿ ಮಾಡಿದೆ.
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಸುದ್ದಿ ಒದಗಿಸುತ್ತಿದ್ದ ಖಶೋಗ್ಗಿ ಅವರನ್ನು ಸೌದಿ ಅರೇಬಿಯಾದ 15 ಮಂದಿಯ ತಂಡ ಇಸ್ತಾಂಬುಲ್ ನಲ್ಲಿರುವ ರಿಯಾದ್ ರಾಯಭಾರ ಕಚೇರಿಯಲ್ಲಿ ಹತ್ಯೆ ಮಾಡಿದೆ ಎಂಬುದು ಟರ್ಕಿಯ ಪೊಲೀಸರ ಅನುಮಾನ. ಇಸ್ತಾಂಬುಲ್ ಮೂಲದ ತನ್ನ ಭಾವಿ ಪತ್ನಿಗಾಗಿ ದಾಖಲೆಗಳನ್ನು ಪಡೆಯುವ ಸಲುವಾಗಿ ಅವರು ರಾಯಭಾರ ಕಚೇರಿಗೆ ಪ್ರವೇಶ ಮಾಡಿದ್ದರು.
ಜಮಾಲ್ ಅವರ ಬಳಿ ಇದ್ದ ಆ್ಯಪಲ್ ವಾಚ್‌ನಲ್ಲಿ ವಿಚಾರಣೆ ರೆಕಾರ್ಡ್ ಆಗಿದೆ.
ಈ ಮಾಹಿತಿ ತನಗೆ ಸಿಕ್ಕಿದ್ದು, ಜಮಾಲ್‌ಗೆ ಭಾರೀ ಹಿಂಸೆಯನ್ನೂ ನೀಡ ಲಾಗಿದೆ ಎಂದು ವರದಿ ಮಾಡಿದೆ. ಪತ್ರಿಕೆಗೆ ಸಿಕ್ಕಿರುವ ಆಡಿಯೋ ಫೈಲ್‌ನಲ್ಲಿ, ಸೌದಿ ಅರೇ ಬಿಯಾದಲ್ಲಿ ವಾಸ ಮಾಡ ಬೇಕಾದರೆ ನೀನು ಸುಮ್ಮನಿರಬೇಕು ಎಂದು ಎಚ್ಚರಿಕೆ ನೀಡುವುದು ಬಯಲಾಗಿದೆ. ಈ ಫೈಲ್‌ನಲ್ಲಿ ಇಸ್ತಾಂಬುಲ್‌ನಲ್ಲಿದ್ದ ಸೌದಿಯ ರಾಯಭಾರಿ ಮೊಹಮ್ಮದ್ ಅಲ್-ಒಟೈಬಿ ಅವರ ಧ್ವನಿಯೂ ಕೇಳಿಸಿದೆ. ಟರ್ಕಿಯ ಪೊಲೀಸರ ವಿಚಾರಣೆಗೆ ಸಹಕರಿಸಲು ಒಟೈಬಿ ಸೌದಿಗೆ ತೆರಳಿದ್ದಾರೆ. ಅಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಲಿದ್ದಾರೆ.