Advertisement
ಪತ್ರಿಕೋದ್ಯಮ ಎಂಬ ಕೋರ್ಸ್ ಅನ್ನು ಮಾಧ್ಯಮ ವಿಜ್ಞಾನ, ಮಾಧ್ಯಮ ಕೌಶಲ ಅಥವಾ ಮಾಧ್ಯಮ ತಂತ್ರಜ್ಞಾನ ಎಂದು ಬದಲಾಯಿಸುವುದು ಸೂಕ್ತ. ಸಾಂಪ್ರದಾಯಿಕ ಮಾಧ್ಯಮ ಕೌಶಲ ಶಿಕ್ಷಣವನ್ನು ಮೀರಿದ ಹೊಸ ವಿಷಯಗಳಿಗೆ ಒತ್ತು ನೀಡಬೇಕು. ಸ್ಥಳೀಯ ಭಾಷೆಯ ಜತೆ ಇಂಗ್ಲಿಷ್ ಭಾಷಾ ಪರಿಣತಿ ಪಡೆಯುವುದು ಕಡ್ಡಾಯ. ಇದರಲ್ಲಿ ಅತ್ಯುತ್ತಮ ಪರಿಣತಿ ಪಡೆದವರಷ್ಟೇ ಮುಂದಿನ ಹಂತಕ್ಕೆ ಹೋಗಲು ಅರ್ಹರು. ಭಾಷಾ ಸ್ಪಷ್ಟತೆ, ವ್ಯಾಕರಣ, ಸಮಯಪ್ರಜ್ಞೆಯ ವಿಶೇಷ ತರಬೇತಿ ಅಗತ್ಯ. ಮಾಧ್ಯಮ ಶಿಕ್ಷಣ ಬೋಧಕರು ಕನಿಷ್ಠ 1-3 ವರ್ಷಗಳ ಸಾಂಸ್ಥಿಕ ಅನುಭವ ಹೊಂದಿರಲೇಬೇಕು.
Related Articles
Advertisement
ಪತ್ರಿಕೋದ್ಯಮಕ್ಕೊಂದು ಮಾನ್ಯತಾ ಏಜೆನ್ಸಿ: ಪತ್ರಿಕೋದ್ಯಮ ಓದಿದವರಿಗೆ ಕಾನೂನುಬದ್ಧ ಪ್ರಮಾಣೀಕರಣ ವ್ಯವಸ್ಥೆ ಬರಬೇಕು. ಪತ್ರಕರ್ತನಾಗ ಬೇಕಾದವನು ಯಾವುದೇ ಕೋರ್ಸ್ ಓದಲಿ. ಆದರೆ ಕನಿಷ್ಠ ಆರು ತಿಂಗಳ ಅರ್ಹತಾ ಕೋರ್ಸ್‌ಗೆ ಹಾಜರಾಗಿ ಅಲ್ಲಿನ ಕಠಿನ ಪರೀಕ್ಷೆಯಲ್ಲಿ ತೇರ್ಗಡೆ ಆದವನಿಗೆ ಮಾತ್ರ ಈ ಮಾನ್ಯತಾ ಪತ್ರ ಲಭಿಸಿ ಪತ್ರಿಕೋದ್ಯಮಕ್ಕೆ ಅಧಿಕೃತ ಪ್ರವೇಶ ಇರುವಂತಾಗಬೇಕು. ಹೀಗಾದಲ್ಲಿ..
-ಪತ್ರಕರ್ತರಿಗೆ ಗೌರವಯುತವಾದ ಶಿಕ್ಷಣ ಇದೆ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗುತ್ತದೆ.-ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಿಗೆ ತಮ್ಮ ಉದ್ಯೋಗಿಯ ಮಾನ್ಯತೆ ಮತ್ತು ಮೌಲ್ಯದ ಮೇಲೆ ಆ ಸಂಸ್ಥೆಯ ಗೌರವವೂ ವೃದ್ಧಿಯಾಗುತ್ತದೆ.
-ವಿಶ್ವವಿದ್ಯಾನಿಲಯ ಅಥವಾ ಮಾನ್ಯತಾ ಏಜೆನ್ಸಿಯ ಪರವಾನಿಗೆ ಸಹಿತ ಬಂದವನ ವೇತನ ಮತ್ತು ಆರ್ಥಿಕ ಸೌಲಭ್ಯಗಳು ಇತರರಿಗಿಂತ ಚೆನ್ನಾಗಿರುತ್ತವೆ.
-ಸರಕಾರದ ಯೋಜನೆಗಳಲ್ಲಿ ಭಾಗಿಯಾಗಲು ಅಥವಾ ಆರ್ಥಿಕ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲು ಈ ಮಾನ್ಯತೆ ಹೊಂದಿದವರಿಗೆ ಆದ್ಯತೆ ಕೊಡಬಹುದು.
-ಮುಖ್ಯವಾಗಿ ಮಾಧ್ಯಮ ಕ್ಷೇತ್ರಕ್ಕೆ ಬರುವವರು ಮೌಲ್ಯಗಳನ್ನು ಹೊಂದುವ, ಪ್ರತಿಪಾದಿಸುವ ಮತ್ತು ಮಾಧ್ಯಮ ಕ್ಷೇತ್ರದ ಪಾವಿತ್ರ್ಯವನ್ನು ಉಳಿಸುವ ದೃಷ್ಟಿಯಿಂದ ಇಂಥ ಅರ್ಹ ವ್ಯಕ್ತಿಗಳು ಮಾತ್ರ ಮಾಧ್ಯಮ ಕ್ಷೇತ್ರ ಪ್ರವೇಶಿಸುವುದು ಸಮಾಜದ ದೃಷ್ಟಿಯಿಂದಲೂ ಒಳ್ಳೆಯದು.
-ಮಾಧ್ಯಮ ವಿಜ್ಞಾನ ಶಿಕ್ಷಣಕ್ಕೊಂದು ವಿಶಿಷ್ಟ ಗುರುತಿಸುವಿಕೆ ಸಿಗುತ್ತದೆ.
-ಒಳ್ಳೆಯ ಪತ್ರಕರ್ತರನ್ನು ಸಮಾಜಕ್ಕೆ ಕೊಟ್ಟ ಗೌರವ ವಿಶ್ವವಿದ್ಯಾನಿಲಯಕ್ಕೂ ಸಲ್ಲುತ್ತದೆ. ಬಹುಕಾರ್ಯನಿರ್ವಹಣೆ ಕೌಶಲ: ಹಾಲಿ ಪತ್ರಿಕೋದ್ಯಮ ಶಿಕ್ಷಣ ಬಹು ಮಾಧ್ಯಮ ನಿರ್ಮಾಣದ ಬಗ್ಗೆ ಒತ್ತು ಕೊಡುವುದಿಲ್ಲ. ಸಾಮಾನ್ಯ ವೀಡಿಯೋ ಗ್ರಾಫರ್‌ಗೆ ಅಥವಾ ಧ್ವನಿವರ್ಧಕ ನಿರ್ವಾಹಕನಿಗೆ ಇರುವ ಜ್ಞಾನವೂ ಮಾಧ್ಯಮ ಶಿಕ್ಷಣ ಪದವೀಧರರಿಗೆ ಇಲ್ಲವಾಗಿದೆ. ಈ ಕೋರ್ಸ್‌ನ ಮರು ವಿನ್ಯಾಸದಲ್ಲಿ ಅದು ಆಗಬೇಕು. ಡಿಜಿಟಲ್ ಮಾಧ್ಯಮ ಶಿಕ್ಷಣಕ್ಕೂ ಒತ್ತು ಕೊಡಬೇಕು. ಇಲ್ಲಿ ಬಹುಕಾರ್ಯನಿರ್ವಹಣೆ ಕೌಶಲ ಅಗತ್ಯ. ವಿಶೇಷ ಪರಿಣತಿ: ವಿಶೇಷ ಪರಿಣತಿ ಎನ್ನುವುದನ್ನು ಕೋರ್ಸ್ ಹಂತದಲ್ಲೇ ತರಬೇಕು. ರಾಜಕೀಯ ವರದಿಗಾರಿಕೆ, ಚುನಾವಣ ಸಮೀಕ್ಷೆಗಳು, ಸಂಕಷ್ಟದ ಸಮಯದಲ್ಲಿ ಪತ್ರಿಕೋದ್ಯಮ, ವಾಣಿಜ್ಯೋದ್ಯಮ/ ಕೈಗಾರಿಕೆ/ ಕಾರ್ಪೋರೆಟ್ ಪತ್ರಿಕೋದ್ಯಮ.. ಮೊದಲಾದ ಬದಲಾದ ವಿಷಯಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಕಲಿಸಬೇಕು. ಈಗ ಕೋರ್ಸ್ ವಿನಿಮಯ ವ್ಯವಸ್ಥೆಯಂತೆ ಅದೇ ಮಾದರಿಯನ್ನು ಇಲ್ಲಿ ತರಬೇಕು. ಈ ಪರಿಣತರು ಮುಂದೆ ವಿವಿಧ ಇಲಾಖೆಗಳ ವಕ್ತಾರರಾಗಿ, ಆಡಳಿತದ ಸಲಹೆಗಾರರಾಗಿ, ರಾಜಕೀಯ ಸಲಹೆಗಾರರಾಗಿ ಕೆಲಸ ಮಾಡಲು ಸಾಧ್ಯ. ಪತ್ರಿಕೋದ್ಯಮ ಓದಿದವರು ನಗರಮುಖಿಗಳಾಗುತ್ತಿದ್ದಾರೆ. ಆದರೆ ಅದೇ ಕೋರ್ಸನ್ನು ಓದಿ ಸ್ಥಳೀಯಮಟ್ಟದಲ್ಲೇ ತಮ್ಮದೇ ಆದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಕೌಶಲ ಈ ಕೋರ್ಸ್ ನಿಂದ ಸಿಗಬಹುದು. ಪತ್ರಕರ್ತರು ವೃತ್ತಿ ಬದುಕಿನ ಮಧ್ಯಭಾಗದಲ್ಲಿ ಅತಂತ್ರರಾಗಬಾರದು. ಯಾವುದೇ ಪರಿಸ್ಥಿತಿ ಎದುರಿಸುವ ಸ್ಥೈರ್ಯ ಅವರಲ್ಲಿ ಮೂಡಬೇಕು. ಯಾವುದೇ ಕೆಲಸವನ್ನು ನಿರ್ವಹಿಸುವ ಕೌಶಲ ಅವರಲ್ಲಿ ಇರಬೇಕು. ಅದಕ್ಕಾಗಿ ಶಿಕ್ಷಣದ ಮೂಲದಲ್ಲಿಯೇ ಆ ಮಾನಸಿಕತೆಯನ್ನು ಬೆಳೆಸಬೇಕಾದ ಅಗತ್ಯವಿದೆ. – ವೇಣು ಶರ್ಮಾ, ಮಂಗಳೂರು