Advertisement

ಜೊತೆ ಜೊತೆಯಲಿ ಇರುವೆನು ಹೀಗೆ ಎಂದು…

03:45 AM Mar 10, 2017 | |

ಸಂಜೆಯ ಸಮಯ ಯಾಕೋ ಈವತ್ತು ಸ್ವಲ್ಪ ಬೇಜಾರು ಅನಿಸಿ ಹೊತ್ತು ಹೋಗಲೆಂದು ಕೆರೆಯ ದಂಡೆಯಲ್ಲಿ ಸುಮ್ಮನೆ ಕುಳಿತಿದ್ದರೆ ಕೈಗಳು ಸುಮ್ಮನಿರಬೇಕಲ್ಲ! ಗೊತ್ತಿಲ್ಲದೆ ಮೆಲ್ಲನೆ ಆಯ್ದ ಒಂದೊಂದೇ ಕಲ್ಲುಗಳನ್ನು ಪ್ರಶಾಂತ ನೀರಿನ ಮೇಲೆ ಎಸೆಯತೊಡಗಿದೆ. ನೀರಲ್ಲಿ ಸುರುಳಿಯಾಗಿ ಸುಳಿಯುವ ಅಲೆಗಳ ಕಂಡು ಅಂತರಂಗದಲ್ಲಿ ಮಲಗಿದ್ದ ಅವನೊಳಗಿನ ನೆನಪುಗಳು ಎಚ್ಚೆತ್ತು ಅರಳಿ ಕೈಹಿಡಿದು ಮರಳಿ ಅದೆಷ್ಟೋ ಹಿಂದಕ್ಕೆ ಸೆಳೆದದ್ದು ಆಗಲೇ.

Advertisement

ಚೂಯಿಂಗ್‌ ಗಮ್‌ ಜಗಿಯುತ್ತಾ ಕಡು ನೀಲಿ ಬಣ್ಣದ ಜೀನ್ಸಿಗೆ ಲೈಟು ಟೀಶರ್ಟ್‌ ಧರಿಸಿ ಆಧುನೀಕತೆಯ ಗೆಟಪ್ಪಲ್ಲಿ ಅಟೋ ಒಂದರಲ್ಲಿ ಬಂದಿಳಿದವಳು ಮೊಬೈಲಿನಲ್ಲಿ ಏನೋ ಗುರುಟುತ್ತಿದ್ದಳು. ಆವತ್ತು ಸಂಜೆ ಅವನೂ ಬಸ್ಸಿಗಾಗಿ ಕಾದು ನಿಂತಿದ್ದವನು. ಬರೇ ಒಂದು ಸೀಟಿನ ವಿಚಾರಕ್ಕೆ ಮುಂದೆ ಅವರಿಬ್ಬರ ಮಧ್ಯೆ ಅಷ್ಟು ದೊಡ್ಡ ಜಗಳ ಬಂದು ಸಂಭವಿಸುತ್ತದೆಂದು ಮೊದಲು ಯಾರೂ ಊಹಿಸಿರಲಿಲ್ಲ. ಜನ ತುಂಬಿದ್ದ ಬಸ್ಸು ನಿಲ್ದಾಣದಲ್ಲಿ ಬಂದು ನಿಲ್ಲುತ್ತಿದ್ದಂತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಇಳಿಯುವ ಸೂಚನೆ ದೊರೆತು ಸರಕ್ಕನೆ ಕಿಟಕಿಯಿಂದ ಕೈಲಿದ್ದ ಕೊಡೆಯನ್ನು ಸೀಟಿಗಾಗಿ ನೀಡಿದ್ದ. ಜನಜಂಗುಳಿಯ ಸರಿಸಿ ಹೇಗೋ ಬಸ್ಸು ಹತ್ತಿ ಸಮಾಧಾನದ ಉಸಿರು ಬಿಟ್ಟು ಕುಳಿತವನು ಸಂಜೆಯ ಪತ್ರಿಕೆ ಬಿಡಿಸಿದ್ದ. ಆಚೀಚೆ ನೋಡುತ್ತಾ ಬಂದು ಬೆರಳು ತೋರಿಸಿ, “”ಹೇ ಏಳ್ಳೋ ಅದು ನಂದು ಸೀಟು. ಅಷ್ಟೇ ಅಲ್ಲ ಆ ಕೊಡೆಯೂ ನಂದು ಕೊಡಿಲ್ಲಿ!” ಅವಳೆಂದಾಗ ಅವನಿಗೆ ಹೇಗಾಗಬೇಡ? ಬಸ್ಸಲ್ಲಿದ್ದವರೆಲ್ಲಾ ಅವಳಿಗೆ ಸಾಥ್‌ ನಿಂತಿದ್ದು ಬಿಟ್ಟರೆ ಎಷ್ಟು ಸಮರ್ಥಿಸಿಕೊಂಡರೂ ಅವನ ಮಾತಿಗೆ ಬೆಲೆ ಕೊಡುವವರೇ ಇಲ್ಲ. ಎಡವಟ್ಟು ಆದದ್ದು ಅಲ್ಲೇ! ಅವಳು ಕೊಡೆ ಎಸೆದಿದ್ದು ಯಾರಿಗೂ ಕಾಣಿಸಿರಲಿಲ್ಲ. ಆ ಕೊಡೆಯನ್ನು ಎತ್ತಿಕೊಂಡು ಯಾರು ಹೋದರೋ ಗೊತ್ತಿಲ್ಲ ! ದುರಾದೃಷ್ಟಕ್ಕೆ ಅವು ಎರಡೂ ಒಂದೇ ಬಣ್ಣದ್ದಾಗಿತ್ತು. ಕೊನೆಗೆ ಕೊಡೆಯೂ ಕೊಟ್ಟು ಸೀಟೂ ಬಿಟ್ಟು ಕೊಟ್ಟು ಕೈಮುಗಿದು ನಿಲ್ಲುವ ಪರಿಸ್ಥಿತಿ ಅಂದು ಅವನದಾಗಿತ್ತು.

“”ನೀನು ಹುಟ್ಟುವಾಗಲೇ ದೊಡ್ಡ ಶ್ರೀಮಂತ ನೋಡು! ಅದಕ್ಕೇ ಕಳೆದ ವರ್ಷ ಎರಡು ಕೊಡೆ ಬಿಸಾಕಿದ್ದೀಯಾ! ಹೇಗಾದ್ರೂ ಹಣ ಹೊಂದಿಸಿ ಈ ವರ್ಷ ಒಂದು ಕೊಡೆ ಕೊಡಿಸ್ತೀನಿ. ಇದನ್ನು ಕಳೆದುಕೊಂಡರೆ ವರ್ಷಪೂರ್ತಿ ನೆನೆಯೋದೊಂದೇ ನಿನ್ನ ಗತಿ!” ಒಂದು ಕಡೆ ಅಮ್ಮನ ಎಚ್ಚರಿಕೆಯ ಮಾತು ಕಿವಿಯಲ್ಲೇ ತಿವಿಯುತ್ತಿದ್ದರೆ, ನಿಂತಲ್ಲೇ ಬೆವರಿದ್ದ.

ಮಳೆಗಾಲದ ದಿನಗಳವು. ಮಲೆನಾಡಿನ ಮನೆಯಿಂದ ಒಂದು ಕಿಲೋಮೀಟರ್‌ ಮಣ್ಣಿನ ರಸ್ತೆಯಲ್ಲಿ ನಡೆದೇ ಡಾಮಾರು ರಸ್ತೆ ಸೇರಬೇಕಿತ್ತು. ಮಧ್ಯೆ ಒಂದು ಹೊಳೆ ಬೇರೆ ದಾಟಬೇಕು. ಪಿಯುಸಿಯಲ್ಲಿ ಒಂದು ಸಬೆjಕ್ಟ್ಲ್ಲಿ ಫೇಲಾಗಿದ್ದಕ್ಕೆ ಅಂದಿನಿಂದ ಶುರುವಾದ ಟ್ಯೂಷನ್‌ ಕ್ಲಾಸಿಗೆ ಸೇರಿದ್ದವ ಪೇಟೆ ತಲಪಬೇಕೆಂದರೆ ಇಪ್ಪತ್ತು ಕಿಲೋಮೀಟರ್‌ ಪ್ರಯಾಣ ಮಾಡುವುದು ಮುಂದೆ ನಿತ್ಯದ ಕೆಲಸ.

ಒಂದೇ ಬಸ್‌ಸ್ಟಾಪಲ್ಲಿ ಇಳಿದ ಇಬ್ಬರಲ್ಲೂ ದುರುಗುಟ್ಟುವ ನೋಟ ವಿನಿಮಯವಾದದ್ದು ಬಿಟ್ಟರೆ ಮತ್ತೆಲ್ಲವೂ ಮೌನ. ಕಣ್ಣ ಮುಂದೆ ಕಳೆದುಕೊಂಡ ಕೊಡೆ ಮತ್ತೆ ಅವಳಿಂದಾದ ಅವಮಾನ. ಇವೆರಡನ್ನೂ ಸಹಿಸಿಕೊಂಡು ಮುಂದೆ ಹೆಜ್ಜೆ ಇಟ್ಟವನಿಗೆ ಅವಳು ಹಿಂಬಾಲಿಸಿದ್ದು ಗೊತ್ತಾದದ್ದು ಇನ್ನು ಹೊಳೆ ದಾಟಲು ಒಂದೇ ದೋಣಿ ಏರಿ ಪಕ್ಕ ಕುಳಿತಾಗಲೇ! ಮತ್ತದೇ ಇರಿಸು-ಮುರಿಸು, ಇಬ್ಬರ ನೋಟಕ್ಕೂ ವಿಮುಖವಾಗುವ ಸರದಿ.

Advertisement

ಮರುದಿನ ಟ್ಯೂಷನ್‌ ಕ್ಲಾಸು ಪ್ರವೇಶಿಸಿದಾಗ ಗೊತ್ತಾದದ್ದು ಅವಳೂ ಅದೇ ಟ್ಯೂಷನ್‌ ಸೆಂಟರಲ್ಲಿ ಕಲಿಯಲು ಬಂದವಳೆಂದು. ಸಂಜೆ ದೋಣಿ ಇಳಿಯುತ್ತಿದ್ದವಳು ಇನ್ನೇನು ಕಾಲು ಜಾರಿಬೀಳುವುದೊಂದೇ ಬಾಕಿ ಇತ್ತು. ಅವನು ಪಕ್ಕನೆ ಕೈಹಿಡಿದ ಬಗೆ ಅವಳ ಮುಖದಲ್ಲಿ ತೇಲಿಬಂದ ನಗೆ ಇಬ್ಬರ ಸ್ನೇಹಕ್ಕೆ ಸೇತುವೆ ಆಯಿತು ಅನ್ನಬಹುದು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಮೆಚ್ಚಿ ಒಲವಿನ ದೀಪವನ್ನು ಹಚ್ಚಿ ಸಾಕಷ್ಟು ಸುತ್ತಾಟ, ಇನ್ನಷ್ಟು ಸಿಹಿ ಕಿತ್ತಾಟಗಳ ಪಯಣ ಮುಂದೆ ಜತೆ ಜತೆಯಾಗಿಯೇ ಸಾಗಿತ್ತು. ಟ್ಯೂಷನ್‌ ಕ್ಲಾಸು ಮುಗಿಸಿ ವಿದಾಯ ಹೇಳಿದವಳು ತನ್ನೂರಿಗೆ ಹೋಗಿ ಎರಡು ವಾರಗಳು ಸಂದಿವೆ. ನಂತರದ ಫೋನು ಕರೆಗೆ, ಸಂದೇಶಗಳಿಗೆ ಅವಳು ಸ್ಪಂದಿಸುತ್ತಲೇ ಇಲ್ಲ. ಯಾಕೋ ಗೊತ್ತಿಲ್ಲ! ಉತ್ತರಗಳು ಸಿಗದ ಅದೆಷ್ಟೋ ಪ್ರಶ್ನೆಗಳು ಅವನೊಳಗೆ ಅನಾಥವಾಗಿ ಬಿದ್ದಿವೆ.

“ತೆರೆದಿದೆ ಮನೆ ಓ…. ಬಾ ಅತಿಥಿ… ಹೊಸ ಬೆಳಕಿನಾ… ಹೊಸ ಗಾಳಿಯಾ…’ ಅನ್ನುತ್ತಿರುವ ಫೋನ್‌ ರಿಸೀವ್‌ ಮಾಡಿದರೆ ರೋಮಾಂಚನ! ಹೌದು, ಇದು ಅವಳದೇ ಧ್ವನಿ, ಆಗಷ್ಟೇ ಆವರಿಸಿದ್ದ ಕತ್ತಲೆಯನ್ನು ಸ್ವಲ್ಪ ಸ್ವಲ್ಪವೇ ಕರಗಿಸಲೆಂದೇ ಬಹುಶಃ ಬಾನಂಚಲ್ಲಿ ಪೂರ್ಣಚಂದಿರ ಮೂಡುತ್ತಿದ್ದಾನೆ ಅನಿಸುತ್ತಿದೆ. ಆಲಿಸಿದ್ದ, ಉತ್ತರಿಸಿದ್ದ ಸಂಭಾಷಣೆಯ ಗುಂಗಿನಲ್ಲಿ ತೆರೆದುಕೊಂಡಂತೆ ಕಾಣಿಸುವ ಬೆಳಕಿನ ದಾರಿಯಲ್ಲಿ ಮೂಡಿದ್ದ ಅವಳ ಹೆಜ್ಜೆ ಗುರುತುಗಳನ್ನು ಅವನು ಅನುಸರಿಸಿ ನಡೆಯುತ್ತಿದ್ದಾನೆ.
 
– ಸುರೇಶ್‌ ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next