ಕಲಬುರಗಿ:ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಕಾರ್ಯ ಚಟುವಟಿಕೆ ಮತ್ತು ಪದಾಧಿಕಾರಿಗಳ ನೇಮಕದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮಹೇಶ ಜೋಷಿ ಅವರು ಹಸ್ತಕ್ಷೇಪ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 30 ಜಿಲ್ಲೆಗಳು ಮತ್ತು ಗಡಿ ಭಾಗದ ಅಧ್ಯಕ್ಷರು ತಮ್ಮ ಆಡಳಿತ ಸುರಳಿತವಾಗಲಿ ಉದ್ದೇಶದಿಂದ ಹಲವರನ್ನು ನೇಮಿಸಿಕೊಳ್ಳುವ ಅಧಿಕಾರ ಪರಿಷತ್ ನಿಬಂಧನೆಗಳಲ್ಲಿದೆ. ಆದರೆ, ನೂತನ ಅಧ್ಯಕ್ಷರು ಅದನ್ನು ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ರಚನೆ ಮಾಡಲು ಆಯಾ ಜಿಲ್ಲಾಧ್ಯಕ್ಷರಿಗೆ ಅಧಿಕಾರವಿದೆ. ಕೇಂದ್ರ ಅಧ್ಯಕ್ಷರು ಜಿಲ್ಲಾಧ್ಯಕ್ಷರು ರಚನೆ ಮಾಡುವ ಸಮಿತಿಗೆ ಅನುಮೋದನೆ ನೀಡಬೇಕಷ್ಟೆ. ಆದರೆ, ಮಹೇಶ ಜೋಶಿ ಅವರು ಈ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಾಲೂಕು, ಗಡಿ ಅಧ್ಯಕ್ಷರ, ಪದಾಧಿಕಾರಿಗಳ ನೇಮಕದಲ್ಲಿ ಕೈಹಾಕುವಂತಿಲ್ಲ ಎಂದರು.
ನೂತನ ಅಧ್ಯಕ್ಷರು ಪರಿಷತ್ತಿನ ನಿಬಂಧನೆಗಳಿಗೆ ತಿದ್ದುಪಡಿ ಮಾಡಲು ಸಮಿತಿ ರಚನೆಗೆ ಮುಂದಾಗಿದ್ದಾಗಿ ಹೇಳಿದ್ದಾರೆ. ಡಿ.4ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಯೇ ಇಲ್ಲದೆ ಸಮಿತಿ ರಚನೆ ಮಾಡಿರುವುದು ನಿಬಂಧನೆಗಳ ವಿರುದ್ಧವಾಗಿದೆ. ಅಧ್ಯಕ್ಷರ ಬಗ್ಗೆ ನಮಗೆ ಗೌರವವಿದೆ. ಅವರಿಗೆ ನಿಜವಾಗಲೂ ತಮಗೆ ಪರಿಷತ್ತಿನ ಬಗ್ಗೆ ಕಳಕಳಿ ಇದ್ದರೆ, ಕೇಂದ್ರ ಕಚೇರಿಗಳಲ್ಲಿಇರುವ ಕಾಯಂ ಸಿಬ್ಬಂದಿ, ವಾಹನ, ಇತರೆ ಸೌಕರ್ಯಗಳನ್ನು ಜಿಲ್ಲಾ ಮತ್ತು ತಾಲೂಕು, ಗಡಿ ಕೇಂದ್ರಗಳಿಗೂ ಕಲ್ಪಿಸಲಿ. ಜಿಲ್ಲೆಗಳಿಗೆ 10 ಲಕ್ಷ ರೂ., ತಾಲೂಕುಗಳಿಗೆ5 ಲಕ್ಷ ರೂ., ಹೋಬಳಿ ಘಟಕಗಳಿಗೆ 3 ಲಕ್ಷ ರೂ. ಅನುದಾನ ಕೊಡಿಸಲಿ. ಅದೆಲ್ಲವನ್ನು ಬಿಟ್ಟು ಇರುವ ಅಧಿಕಾರ ಕಿತ್ತುಕೊಳ್ಳುವ ಮನೋಭಾವ ತೋರಬಾರದು ಎಂದರು.