ಪೋರ್ಟ್ ಅಗಸ್ಟಾ (ಸೌತ್ ಆಸ್ಟ್ರೇಲಿಯ): ಆಸ್ಟ್ರೇಲಿಯದ ಜೋಶ್ ಡನ್‌ಸ್ಟನ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅಮೋಘ ಸಾಧನೆಗೈದು ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಅವರು 35 ಓವರ್‌ಗಳ ಪಂದ್ಯವೊಂದರಲ್ಲಿ 40 ಪ್ರಚಂಡ ಸಿಕ್ಸರ್‌ಗಳ ನೆರವಿನಿಂದ 307 ರನ್ ಬಾರಿಸಿದರಷ್ಟೇ ಅಲ್ಲ, ತಂಡದ ಒಟ್ಟು ಮೊತ್ತದ ಸರ್ವಾಧಿಕ ಪಾಲನ್ನು ಒಬ್ಬರೇ ಪೇರಿಸಿ ನೂತನ ದಾಖಲೆ ಬರೆದಿದ್ದಾರೆ. ಈ ಸಂದರ್ಭದಲ್ಲಿ ಪತನವಾದದ್ದು ಸರ್ ವಿವಿಯನ್ ರಿಚರ್ಡ್ಸ್ ದಾಖಲೆ!
ಪೋರ್ಟ್ ಅಗಸ್ಟಾದ “ಬ್ರಾಡ್‌ಡಾಕ್ ಪಾರ್ಕ್’ನಲ್ಲಿ ನಡೆದ ಪಂದ್ಯದಲ್ಲಿ ಜೋಸ್ ಡನ್‌ಸ್ಟನ್ ಈ ದಾಖಲೆ ಸ್ಥಾಪಿಸಿದರು. “ವೆಸ್ಟ್ ಆಗಸ್ಟಾ’ ತಂಡದ ಪರವಾಗಿ “ಸೆಂಟ್ರಲ್ ಸ್ಟರ್ಲಿಂಗ್’ ತಂಡದ ವಿರುದ್ಧ ನಡೆದ 35 ಓವರ್‌ಗಳ ಪಂದ್ಯದಲ್ಲಿ ಡನ್‌ಸ್ಟನ್ 309 ರನ್ ಬಾರಿಸಿ ಮೆರೆದರು. ತಂಡದ ಸ್ಕೋರ್ 354 ರನ್ನುಗಳಾದರೆ, ಇದರಲ್ಲಿ ಡನ್‌ಸ್ಟನ್ ಗಳಿಕೆಯೇ 307 ರನ್. ಈ ಬ್ಯಾಟಿಂಗ್ ವೈಭವದ ವೇಳೆ ತಂಡದ ಒಟ್ಟು ಮೊತ್ತದ ಶೇ. 86.7 ರನ್ನನ್ನು ಅವರೊಬ್ಬರೇ ಬಾರಿಸಿದಂತಾಯಿತು. ಇದೊಂದು ನೂತನ ದಾಖಲೆ.
ಇಂಗ್ಲೆಂಡ್ ಎದುರಿನ 1984ರ ಓಲ್ಡ್ ಟ್ರಾಫರ್ಡ್ ಏಕದಿನ ಪಂದ್ಯದ ವೇಳೆ ವೆಸ್ಟ್ ಇಂಡೀಸಿನ ಬ್ಯಾಟಿಂಗ್ ದೈತ್ಯ ವಿವಿಯನ್ ರಿಚರ್ಡ್ಸ್, ತಂಡದ ಒಟ್ಟು ಮೊತ್ತದ ಶೇ. 69.48 ರನ್ ಪೇರಿಸಿದ ದಾಖಲೆ ಪತನಗೊಂಡಿತು. ಅಂದು ವಿಂಡೀಸ್ 9ಕ್ಕೆ 272 ರನ್ ಪೇರಿಸಿತ್ತು. ಇದರಲ್ಲಿ ರಿಚರ್ಡ್ಸ್ ಗಳಿಕೆ 189 ರನ್.
ವೆಸ್ಟ್ ಆಗಸ್ಟಾ ತಂಡದ ಇನ್ನಿಂಗ್ಸ್ ವೇಳೆ 5 ಮಂದಿ ಖಾತೆ ತೆರೆಯದೇ ಹೋದರೆ, ನಾಲ್ವರು ಹತ್ತರ ಗಡಿ ಮುಟ್ಟಲಿಲ್ಲ. 18 ರನ್ ಮಾಡಿ ಔಟಾಗದೆ ಉಳಿದ ಬೆನ್ ರಸೆಲ್ ಅವರದು ಅನಂತರದ ಹೆಚ್ಚಿನ ಗಳಿಕೆ.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ತ್ರಿಶತಕ ಬಾರಿಸಿದ್ದನ್ನು ನಂಬಲಾಗುತ್ತಿಲ್ಲ. ತನ್ನ ಮೊಬೈಲ್ ಪುರಸೊತ್ತಿಲ್ಲದೇ ಬಡಿದುಕೊಳ್ಳುತ್ತಿದೆ…’ ಎಂದು ಪ್ರತಿಕ್ರಿಯಿಸಿದ್ದಾರೆ ಜೋಶ್ ಡನ್‌ಸ್ಟನ್.