Advertisement

ಬಿದಿರ ಕೊರಡು ಕೊನರದೇಕೆ?

12:43 PM Jan 12, 2021 | Team Udayavani |

ಮೈಸೂರಿನಲ್ಲಿ ರಾಜಪುರೋಹಿತರ ವಂಶದಲ್ಲಿ ಹುಟ್ಟಿದ ವ್ಯಕ್ತಿ. ಐದನೇ ವಯಸ್ಸಿನಲ್ಲೇ ಪಿತೃವಿಯೋಗ. ಆದರೂ ತನ್ನ ಕುಲಗೌರವದ ಬಗ್ಗೆ, ಕುಟುಂಬದ ಘನತೆಯ ಬಗ್ಗೆ ಅತ್ಯಂತ ಸ್ಪಷ್ಟ ಕಲ್ಪನೆಯಿದ್ದ ಹುಡುಗ. ಹನ್ನೆರಡನೇ ವಯಸ್ಸಿಗೆ ರಾಮಾಯಣ, ಮಹಾಭಾರತ, ಭಾಗವತಗಳನ್ನು ಅರೆದುಕುಡಿದಿದ್ದ ನಿಶಿತಮತಿ. ಹದಿನೈದರ ವಯಸ್ಸಿಗಾಗಲೇ ಹಳೆಗನ್ನಡದ
ಛಂದಸ್ಸು, ವ್ಯಾಕರಣಗಳನ್ನೆಲ್ಲ ಆಮೂಲಾಗ್ರ ಓದಿ ತಿಳಿದು ಸ್ವತಃ ತಾನೂ ಕಾವ್ಯರಚನೆ ಮಾಡುತ್ತಿದ್ದ ಪ್ರತಿಭಾವಂತ! ಅವರು ದೇವುಡು. ನರಸಿಂಹ ಶಾಸ್ತ್ರೀ ಎಂಬುದು ಅವರ ನಾಮಧೇಯ.

Advertisement

ಮನೆತನದ ಹೆಜ್ಜೆಗುರುತುಗಳಲ್ಲೇ ಮುನ್ನಡೆದಿದ್ದರೆ ದೇವುಡು, ತಮ್ಮ ತಂದೆ-ತಾತಂದಿರಂತೆ ತಾವೂ ಆಸ್ಥಾನ ವಿದ್ವಾಂಸರಾಗಿ ಜೀವನ ಕಳೆಯುತ್ತಿದ್ದರೇನೋ. ಆದರೆ ಅವರದು ಹಲವು ದಿಕ್ಕಿಗೆ ಹರಿಯುವ ಬಹುಮುಖ ಪ್ರತಿಭೆ. ಬೆಂಗಳೂರಿಗೆ ಬಂದರು, ಮಕ್ಕಳ ಪತ್ರಿಕೆ ಮಾಡಿದರು, ಧಾರ್ಮಿಕ-ಸಾಮಾಜಿಕ ಕಾದಂಬರಿಗಳನ್ನು ಬರೆದರು, ಪತ್ರಿಕೆಯಲ್ಲಿ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸುವ ಸಂಪ್ರದಾಯಕ್ಕೆ ಚಾಲನೆ ಕೊಟ್ಟರು, ಸಿನೆಮಾ ಕ್ಷೇತ್ರಕ್ಕೆ ನುಗ್ಗಿದರು, ಚಿತ್ರಗಳನ್ನು ಸ್ವತಃ ನಿರ್ಮಾಣ ಮಾಡಿದರು, ಶಾಲೆ ಕಟ್ಟಿ ಬೆಳೆಸಿದರು, ನಾಟಕರಂಗದಲ್ಲಿ ಕೈಯಾಡಿಸಿದರು, ವಿಶ್ವವಿದ್ಯಾಲಯದಲ್ಲಿ ಸರಣಿ ಉಪನ್ಯಾಸಗಳನ್ನು ಮಾಡಿದರು, ಸಂಸ್ಕೃತದ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದರು, ರಾಜ್ಯದ ಪಠ್ಯಪುಸ್ತಕ ರಚನೆಯ ಸಮಿತಿಯಲ್ಲಿ ಗುರುತರವಾದ ಪಾತ್ರ ವಹಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿಗೆ ಮನುಷ್ಯಪ್ರಪಂಚದ ಒಂದು ಸಂವಾದೀ ಉದಾಹರಣೆಯಿದ್ದರೆ ಅದು ಇವರೇ ಎನ್ನುವಷ್ಟು ಅವರ ಪ್ರತಿಭೆಗೆ ನೂರು ದಿಕ್ಕು, ಸಾವಿರ ದೆಸೆ.

ಇದನ್ನೂ ಓದಿ: devudu narasimha sastry

ದೇವುಡು ಅವರು ಮೈಸೂರಿನಲ್ಲಿದ್ದ ಸಂದರ್ಭ. ಅವರಿಗೆ 18ರ ಹರೆಯ. ಮೈಸೂರಿನ ಕೇಂದ್ರವೃತ್ತದಲ್ಲಿ ಓರ್ವ ಪಾದ್ರಿ ಮತಭಾಷಣ ಮಾಡುತ್ತಿದ್ದ. ನೂರಾರು ಮಂದಿ ಸೇರಿದ್ದರು. ಗುಂಪು ಕಂಡು ಹುರುಪುಗೊಂಡ ಪಾದ್ರಿ ತನ್ನ ಮತಪ್ರಚಾರದ ಭಾಷಣ ಕೈಬಿಟ್ಟು ಹಿಂದೂ ಧರ್ಮದ ಅವಹೇಳನಕ್ಕೆ ನಿಂತುಬಿಟ್ಟ. “ನಿಮ್ಮ ದೇವರು ಕೃಷ್ಣ ಕೊಳಲು ಹಿಡಿದಿದ್ದಾನೆ. ಅವನು
ಕೊಳಲೂದಿದರೆ ಬತ್ತಿದ ನದಿಗಳಲ್ಲಿ ಪ್ರವಾಹ ತುಂಬುತ್ತಂತೆ. ಬಾಡಿದ ಹೂಗಳು ಅರಳಿ ನಿಲ್ತಾವಂತೆ. ಪಾಳುಬಿದ್ದ ಹೊಲಗದ್ದೆಯಲ್ಲಿ ಬೆಳೆ ಬರುತ್ತಂತೆ.

ಕೊರಡು ಕೂಡ ಕೊನರುತ್ತಂತೆ, ಎಲೆ-ಚಿಗುರು ಬಿಡುತ್ತಂತೆ. ಅದೆಲ್ಲ ಹೌದೇ ಆಗಿದ್ದರೆ ಆತನ ಕೈಯಲ್ಲಿರುವ ಆ ಬಿದಿರು ಕೊಳವೆ ಕೊಳಲಿನಲ್ಲೂ ಎಲೆ ಹೂಗಳೆಲ್ಲ ಬರಬೇಕಿತ್ತಲ್ಲ? ಅದೇಕೆ ಇನ್ನೂ ಬಿದಿರಾಗಿಯೇ ಉಳಿದಿದೆ?” ಎಂದು ಕೆಣಕಿದ. ನೆರೆದಿದ್ದ ಮಂದಿಗೆ ಇದರಿಂದ ಸಂಕಟವೇನೋ ಆಯಿತು, ಆದರೆ ಪಾದ್ರಿಯ ಪ್ರಶ್ನೆಗೆ ಬದಲು ಹೇಳಲು ಆಗಲಿಲ್ಲ. ಮೌನವಾಗಿದ್ದ ಆ
ಗುಂಪಿನಿಂದ ಈ ಹದಿನೆಂಟರ ಹುಡುಗ ಮುಂದೆ ಬಂದ. “ಮಹನೀಯರೇ, ಕೃಷ್ಣನ ಕೊಳಲು ಯಾಕೆ ಕೊನರುವುದಿಲ್ಲ ಎಂದು ಕೇಳುತ್ತಿದ್ದೀರಿ. ಕೃಷ್ಣನ ಸ್ಪರ್ಷಮಾತ್ರದಿಂದ ಸತ್ತಂತೆ ಮಲಗಿದವರು ಎದ್ದುಬರುವ ಪವಾಡ ನಡೆಯುತ್ತದೆ. ಅಂಥಾದ್ದರಲ್ಲಿ, ಅವನ ಕೈಯೊಳಗಿರುವ ಬಿದಿರು ಚಿಗುರದೆ ಹೋದೀತೇ? ಆದರೆ ಆ ಬಿದಿರಿಗೂ ಭಯ ಇದೆ. ತಾನು ಚಿಗುರಿ ಹೂ-ಕಾಯಿ ಬಿಟ್ಟರೆ ಕೃಷ್ಣ ಎಲ್ಲಿ ತನ್ನನ್ನು ಎಸೆದು ಬೇರೊಂದು ಬಿದಿರ ಕೊಳವೆ ಎತ್ತಿಕೊಳ್ಳುತ್ತಾನೋ ಎಂದು ಹೆದರಿ ಆ ಕೊಳಲು ಕೊನರದೆ ಹಾಗೇ ಉಳಿದಿದೆ’ ಎಂದು ಎದೆಸೆಟೆಸಿ ಉತ್ತರ ಕೊಟ್ಟ. ಅಷ್ಟು ಹೊತ್ತು ಪಾದ್ರಿಯ ಮಾತುಗಳನ್ನು ಗತ್ಯಂತರವಿಲ್ಲದೆ ಕೇಳುತ್ತ ಕೈಹೊಸಕಿಕೊಳ್ಳುತ್ತ ನಿಂತಿದ್ದ ಅಸಹಾಯ ಸಮೂಹ ಇದೀಗ ಉತ್ತೇಜಿತವಾಗಿ ಮೈಮರೆತು ಚಪ್ಪಾಳೆ ತಟ್ಟಿತು.

Advertisement

ದೇವುಡು ಅವರ ವಾದಕ್ಕೆ ಮರುವಾದ ಹೂಡಲು ಸಾಧ್ಯವಾಗದೆ ಪಾದ್ರಿ ಮೌನವಾಗಿ ಜಾಗ ಖಾಲಿ ಮಾಡಿದ.

– ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next