Advertisement

ಅಪ್ಪನ ಮೇಲಿನ ಪ್ರೀತಿಗೆ ತನ್ನ ಬದುಕನ್ನೇ ಬಲಿಕೊಡುವ ಭೀಷ್ಮ

09:51 AM Nov 28, 2019 | Hari Prasad |

ಕುರುವಂಶದ ದೊರೆ ಶಂತನುವಿನಿಂದ ತನಗೆ ಹುಟ್ಟಿದ್ದ ಏಳೂ ಮಕ್ಕಳನ್ನು ನದಿಗೆ ಎಸೆದ ಗಂಗೆ, ಕೇಳುಗರಲ್ಲಿ ಒಂದು ವಿಚಿತ್ರ ತಳಮಳವನ್ನು ಸೃಷ್ಟಿಸುತ್ತಾಳೆ. ಎಷ್ಟೋ ಸಾವಿರ ವರ್ಷಗಳ ನಂತರ ಇದನ್ನು ಕಥೆಯಾಗಿ ಓದುವ ನಮಗೆ, ಇದೊಂದು ಪುರಾಣವಾಗಿ ಕಾಣುತ್ತದೆ. ಆದ್ದರಿಂದ ವಾಸ್ತವಿಕ ನೆಲೆಗಟ್ಟಿನಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಲ್ಪಿಸಿಕೊಂಡು ನೋಡಿ…! ವರ್ತಮಾನ ಕಾಲದಲ್ಲಿ ಹಾಗೆ ಮಗುವನ್ನು ಕೊಲ್ಲುವ ಕೆಲವು ವ್ಯಕ್ತಿಗಳನ್ನು ನೋಡಿ, ನಿಮ್ಮೆದೆ ಒಡೆದುಹೋಗುತ್ತದೆ. ಗಂಗೆ ಮಾಡಿದ್ದು ಅಂತಹ ಭೀಕರ ಕೆಲಸವನ್ನೇ. ಅದನ್ನು ಕಣ್ಣಾರೆ ಕಂಡ ಶಂತುವಿನ ಪರಿಸ್ಥಿತಿ ಹೇಗಿದ್ದಿರಬಹುದು? ಆದರೆ ಗಂಗೆ ಮರುಮಾತಾಡದೆ ಎಂಟನೆಯ ಮಗುವನ್ನು ಶಂತನುವಿಗೆ ಒಪ್ಪಿಸುತ್ತಾಳೆ.

Advertisement

ಅದಕ್ಕೂ ಮುನ್ನ ಐದು ವರ್ಷ ತನ್ನಲ್ಲಿಟ್ಟುಕೊಂಡು ಸ್ವತಃ ಪರಶುರಾಮರಿಂದ ಅವನಿಗೆ ಬಿಲ್ವಿದ್ವೆ, ವೇದವಿದ್ಯೆಗಳನ್ನು ಕಲಿಸುತ್ತಾಳೆ. ಆ ಬಾಲಕ ಐದೇವರ್ಷಕ್ಕೆ ತನ್ನ ಬಾಣಗಳಿಂದ ಗಂಗಾನದಿಯ ಹರಿವನ್ನೇ ತಡೆಯುವ ಶಕ್ತಿ ಹೊಂದಿರುತ್ತಾನೆ. ಮಗ ಇಂತಹ ಪೌರುಷವನ್ನು ತೋರಿದ್ದಾಗಲೇ ಶಂತನು ಅವನನ್ನು ಮರಳಿ ಪಡೆಯುವುದು. ಆದರೆ ಗಂಗೆ ಮರಳಿ ಸಿಗುವುದಿಲ್ಲ. ಅವಳು ತನಗೆ ಶಾಪಮುಕ್ತಿಯಾಗಿದ್ದರಿಂದ ಮರಳಿ, ತನ್ನ ಜಾಗಕ್ಕೆ ಹಿಂತಿರುಗುತ್ತಾಳೆ. ಇದು ಶಂತನುವಿಗೆ ತಡೆದುಕೊಳ್ಳಲು ಸಾಧ್ಯವೇ ಆಗದ ನಿರಾಸೆಯಾದರೂ, ಸದ್ಯ ಮಗ ಸಿಕ್ಕಿದನಲ್ಲ ಎನ್ನುವುದು ಸಮಾಧಾನದ ಸಂಗತಿ. ಆ ಮಗನಿಗೆ ಆಗ ದೇವವ್ರತ ಎಂದು ನಾಮಕರಣವಾಗಿರುತ್ತದೆ. ಮುಂದೆ ಅದೇ ಮಗ ಭೀಷ್ಮ ಎನಿಸಿಕೊಳ್ಳುತ್ತಾನೆ.

ಗಂಗೆಯನ್ನು ಬಿಟ್ಟ ಮೇಲೂ ಶಂತನುವಿಗೆ ಶಿಕಾರಿ ಹುಚ್ಚು ಹೋಗಿರುವುದಿಲ್ಲ. ಹಾಗೆ ಮತ್ತೂಮ್ಮೆ ಶಿಕಾರಿಗೆ ಹೋಗಿದ್ದಾಗ, ದೋಣಿ ನಡೆಸುವ ಜಾಗದಲ್ಲಿ ಅತ್ಯಂತ ಸುಂದರ ಸ್ತ್ರೀ ಕುಳಿತಿರುವುದನ್ನು ಶಂತನು ನೋಡುತ್ತಾನೆ. ತಾನೂ ಅವಳೊಂದಿಗೆ ಹೋಗುತ್ತಾನೆ. ಅವಳನ್ನು ಮದುವೆಯಾಗಬೇಕೆಂದು ಆಗಲೇ ಅನಿಸುತ್ತದೆ. ಆಕೆಯೇ ಸತ್ಯವತಿ. ತನಗೆ ಒಪ್ಪಿಗೆಯಿದೆ, ಅಪ್ಪ ದಾಶರಾಜ ಒಪ್ಪಿದರೆ ಆಯಿತು ಎಂದು ಬಿಡುತ್ತಾಳೆ. ಶಂತನು ಹೋಗಿ ದಾಶರಾಜನಲ್ಲಿ ಕೇಳಿಕೊಳ್ಳುತ್ತಾನೆ. ದಾಶರಾಜ ವಿಷಯ ಕೇಳಿ ಸಂಭ್ರಮಿಸುತ್ತಾನೆ. ಮದುವೆಗೆ ಒಪ್ಪಲು ಅವನು ಷರತ್ತುಗಳನ್ನು ಹಾಕುತ್ತಾನೆ.

ನನ್ನ ಮಗಳಿಗೆ ಹುಟ್ಟಿದ ವ್ಯಕ್ತಿಯೇ ರಾಜನಾಗಬೇಕು ಎನ್ನುವುದು ಅದು. ಶಂತನುವಿಗೆ ಇದು ಸಾಧ್ಯವಾಗದ ಮಾತು ಅನಿಸಿ ಮರಳಿ ಅರಮನೆಗೆ ಬರುತ್ತಾನೆ. ಆದರೆ ಸತ್ಯವತಿಯನ್ನು ಮರೆಯಲು ಸಾಧ್ಯವಾಗುವುದಿಲ್ಲ, ಮತ್ತೂಂದುಕಡೆ ಹರೆಯದ ಹುಡುಗ, ತನ್ನ ಪ್ರೀತಿಯ ಪುತ್ರ ದೇವವ್ರತನನ್ನು ರಾಜನನ್ನಾಗಿ ಮಾಡದಿರಲು ಅವನಿಗೆ ಮನಸ್ಸು ಒಪ್ಪುವುದಿಲ್ಲ. ಅತ್ಯಂತ ಖೇದ, ತಳಮಳ, ಕಾತುರತೆಯಿಂದ ಶಂತನು ನೊಂದು ಹಾಸಿಗೆ ಹಿಡಿಯುತ್ತಾನೆ. ದಿನೇದಿನೇ ಅವನು ಏಕಾಂತದಲ್ಲಿರುತ್ತ, ಸಂಪೂರ್ಣ ವಿಮುಖನಾಗಿಬಿಡುತ್ತಾನೆ. ರಾಜನ ಈ ವಿಚಿತ್ರ ವರ್ತನೆ ದೇವವ್ರತನಿಗೆ ಪ್ರಶ್ನೆಯಾಗುತ್ತದೆ.

ಸಾರಥಿಯ ಮೂಲಕ ಸಂಪೂರ್ಣ ಮಾಹಿತಿ ಪಡೆದ ಅವನು, ನೇರವಾಗಿ ದಾಶರಾಜನಲ್ಲಿ ಹೋಗುತ್ತಾನೆ, ಮಾತ್ರವಲ್ಲ ನಿನ್ನ ಮಗಳಿಗೆ ಹುಟ್ಟಿದ ವ್ಯಕ್ತಿಗೇ ರಾಜತ್ವ ನೀಡಲು ಸಿದ್ಧ ಎಂದು ಘೋಷಿಸುತ್ತಾನೆ. ದಾಶರಾಜ ಅಲ್ಲಿಗೆ ತೃಪ್ತನಾಗುವುದಿಲ್ಲ. ನೀನೇನೋ ಒಪ್ಪುತ್ತೀಯ ಮುಂದೆ, ನಿನಗೆ ಹುಟ್ಟುವ ಮಕ್ಕಳು ತಕರಾರು ತೆಗೆದರೆ ಎಂದು ಕೇಳುತ್ತಾನೆ. ಆ ವ್ಯಕ್ತಿಯ ಬೇಡಿಕೆ ದುರಾಸೆಯ ಪರಮಾವಧಿಯೇ ಆದರೂ, ತಂದೆಯ ಖುಷಿಯ ಮುಂದೆ ಇವೆಲ್ಲ ಗೌಣ ಎಂದು ಭಾವಿಸುವ ದೇವವ್ರತ, ಆಯಿತು ನಾನು ಮದುವೆಯೇ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ.

Advertisement

ರಾಜಪುತ್ರನೊಬ್ಬ ತನ್ನ ಸಂಪೂರ್ಣ ಸುಖವನ್ನು ತ್ಯಜಿಸುವ ಅತ್ಯಂತ ಭೀಷಣವಾದ ಪ್ರತಿಜ್ಞೆ ಮಾಡುತ್ತಾನೆ. ಅದಕ್ಕೆ ಅವನನ್ನು ಶಾಶ್ವತವಾಗಿ ಭೀಷ್ಮ ಎಂದು ಕರೆಯಲಾಗುತ್ತದೆ. ಇದನ್ನು ಕೇಳಿದ ಅಪ್ಪ ಶಂತನು ಮಗನಿಗೆ ನೀನು ಇಚ್ಛಾಮರಣಿಯಾಗು ಎಂದು ವರ ನೀಡುತ್ತಾನೆ. ಮುಂದೆ ಈ ಭೀಷ್ಮ ಸಾವಿರ ಬದುಕುತ್ತಾನೆ ಎಂದು ಮಹಾಭಾರತದಲ್ಲಿ ಹೇಳಲಾಗುತ್ತದೆ. ಅಪ್ಪನ ಮೇಲಿನ ಪ್ರೀತಿಗೆ ತನ್ನ ಬದುಕನ್ನೇ ಬಲಿಕೊಡುವ ಪುರಾಣಗಳ ಅದ್ಭುತ ಕಥೆಗಳಲ್ಲಿ ಇದು ಅತ್ಯಂತ ಮಹತ್ವದ ಸ್ಥಾನ ಪಡೆಯುತ್ತದೆ.

– ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next