ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ನ ಸ್ಟಾರ್ ಆಟಗಾರ ಜಾಸ್ ಬಟ್ಲರ್ ಈ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಾಲ್ಕನೇ ಶತಕ ಬಾರಿಸಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶತಕ ಬಾರಿಸಿ ತಮ್ಮ ತಂಡವನ್ನು ಫೈನಲ್ ಗೆ ಕೊಂಡೊಯ್ಯಲು ಸಹಾಯ ಮಾಡಿದರು.
ಆರ್ ಸಿಬಿ ನೀಡಿದ 158 ರನ್ ಗುರಿ ಬೆನ್ನತ್ತಿದ್ದ ರಾಯಲ್ಸ್ ಪಂದ್ಯವನ್ನು 18.1 ಓವರ್‌ಗಳಲ್ಲಿ ಜಯ ಸಾಧಿಸಿತು. ಬಟ್ಲರ್ 60 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರು.
ಇದರೊಂದಿಗೆ ಬಟ್ಲರ್ ಒಂದೇ ಐಪಿಎಲ್ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರ ನಾಲ್ಕು ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಆರ್ ಸಿಬಿ ಮಾಜಿ ನಾಯಕ 2016 ರಲ್ಲಿ ನಾಲ್ಕು ಶತಕಗಳ ಸಾಧನೆ ಮಾಡಿದ್ದರು.
ತನ್ನ ಚೊಚ್ಚಲ ಸೀಸನ್ ಆಡುತ್ತಿರುವ ಗುಜರಾತ್ ಟೈಟಾನ್ಸ್ ವಿರುದ್ಧ ರವಿವಾರ ರಾಜಸ್ಥಾನ ರಾಯಲ್ಸ್ ಫೈನಲ್ ಪಂದ್ಯವಾಡಲಿದೆ.
ಇದನ್ನೂ ಓದಿ:ಏಷ್ಯಾ ಕಪ್ ಹಾಕಿ ಸೂಪರ್-4: ಜಪಾನ್ ವಿರುದ್ಧ ಸೇಡಿಗೆ ಕಾತರ
ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಬಟ್ಲರ್ 824 ರನ್ ಗಳಿಸಿದ್ದಾರೆ. ಮೊದಲ ಸೀಸನ್ ನಲ್ಲಿ ಕಪ್ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ನಂತರ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ ಗೆ ಕಾಯುವಿಕೆ ಮತ್ತೆ ಮುಂದುವರಿದಿದೆ.