ನನ್ನ ಬಳಿ ಬರುತ್ತಲೇ ಅವಳ ಹೆಸರು ಕೂಗಿದೆ. ಆ ಕಡೆ, ಈ ಕಡೆ ನೋಡಿದಳು. ಮತ್ತೂಮ್ಮೆ ಕೂಗಿದೆ. ನಿಂತುಕೊಂಡಳು.
“ನಿಮ್ಮ ಜೊತೆ ಮಾತನಾಡಬೇಕಾಗಿತ್ತು’ ಎಂದೆ. “ಹೇಳಿ…’ ಎಂದು ಮುಗುಳ್ನಗೆ ಬೀರಿದಳು. ನನಗೆ ಒಂದಿಷ್ಟು ಧೈರ್ಯ ಬಂದಂತಾಯಿತು.
ಲವ್ ಪ್ರಪೋಸ್ ಮಾಡುವಾಗ ಪಟ್ಟ ಪಡಿಪಾಟಿಲು ಎಲ್ಲರಲ್ಲೂ ಆಗಾಗ ಮೂಡಿ ಕಚಗುಳಿ ಇಡುತ್ತಿರುತ್ತದೆ. ಆಗ ಪಟ್ಟ ಪಾಡಿನಿಂದ ಬೆವರು ಇಳಿದರೆ, ಈಗ ಅದನ್ನು ನೆನೆದಾಗ ದೊಡ್ಡ ನಗೆ ಮೂಡುತ್ತಿರುತ್ತದೆ. ಉಳಿದವರ ಮಾತು ಅತ್ಲಾಗಿರಲಿ. ನನ್ನದೇ ಕಥೆ ಹೇಳೆ¤àನೆ ಕೇಳಿ: ನಾನು ಪ್ರಪ್ರಥಮವಾಗಿ ಒಂದು ಹುಡುಗಿಗೆ ಪ್ರೇಮ ನಿವೇದನೆ ಸಲ್ಲಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಗ, ಆತುರಕ್ಕೆ ಬಿದ್ದ ಆಂಜನೇಯನಂತಾಗಿತ್ತು ನನ್ನ ಪರಿಸ್ಥಿತಿ. ನಾನು ಪಿಯುಸಿ ಓದುತ್ತಿದ್ದ ಸಮಯವದು, ಹರೆಯದ ಹುಮ್ಮಸ್ಸು ತುಂಬಿತ್ತು. ನನಗೂ ಒಬ್ಬ ಗೆಳತಿ ಬೇಕು ಎಂದೇನೂ ಅನ್ನಿಸಿರಲಿಲ್ಲ. ಆದರೂ ತಪ್ಪಿಒಂದು ಹುಡುಗಿಯ ಹಿಂದೆ ಬಿದ್ದೆ. ನಮ್ಮ ಏರಿಯಾದ ಸುಂದರಿ ಅವಳು… ಪಿಯುಸಿ ಓದುತ್ತಿದ್ದಳು ಮತ್ತು ಬಾಯ್‌ಫ್ರೆಂಡ್ ಇಲ್ಲದ ಹುಡುಗಿಯರ ಲಿಸ್ಟಲ್ಲಿ ಮೋಸ್ಟ್ ವಾಂಟೆಡ್ ಹುಡ್ಗಿ. ನನ್ನ ಸ್ನೇಹಿತರಲ್ಲಿ ಅದಾಗಲೇ ಇಬ್ಬರು ಅವಳಿಗೆ ಪ್ರಪೋಸ್ ಮಾಡಿ ಫಲವಿಲ್ಲದೆ ವಾಪಸ್ಸಾಗಿದ್ದರು. ಇನ್ನು ಕೆಲವು ಯುವಕರು ಹೀಗೆ ಹೋಗಿ, ಹಾಗೆ ಬಂದು ಪೆವಿಲಿಯನ್ ಸೇರಿದ್ದರು.
ಹೀಗೇ ಒಂದು ದಿನ ಸಾಯಂಕಾಲ ಸ್ನೇಹಿತರೆಲ್ಲಾ ಸೇರಿದಾಗ ಅವಳ ವಿಷಯ ಪ್ರಸ್ತಾಪವಾಯಿತು. ನಾನು “ಅವಳೇನು ಮಹಾ ಸುಂದರೀನಾ?’ ಎಂದೆ. ಅಷ್ಟಕ್ಕೇ ಗೆಳೆಯರು “ಧಮ್ ಇದ್ರೆ ಅವಳನ್ನು ಲವ್‌ಗೆ ಬೀಳಿಸು ನೋಡೋಣ?’ ಎಂದು ಸವಾಲ್ ಎಸೆದೇ ಬಿಟ್ಟರು. ಅದನ್ನು ನಾನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ಸಂಶೋಧನೆಗೆ ಧುಮುಕಿದೆ. ಮಾರನೇ ದಿನದಿಂದಲೇ ಆಪರೇಷನ್ ಖೆಡ್ಡಾ ಪ್ರಾರಂಭವಾಯಿತು. ನನ್ನ ಕಾಲೇಜ್ ಟೈಮಿಂಗ್ ಅವಳ ಕಾಲೇಜ್ ಟೈಮಿಂಗ್‌ಗೆ ಸರಿಯಾಗಿ ಪರಿವರ್ತಿಸಿದೆ. ಅವಳು ಕಾಲೇಜ್‌ಗೆ ಹೋಗೊ-ಬರೋ ದಾರೀಲಿ ಏನೇನೊ ಸರ್ಕಸ್ ಮಾಡೋದು, ನನಗೆ ಪರಿಚಯವಿರುವ ಅವಳ ಗೆಳತಿಯರ ಬಳಿ ಅವಳ ಬಗ್ಗೆ ತಿಳಿದುಕೊಳ್ಳುವುದು, ಅವಳ ಮನೆ, ಕಾಲೇಜ್ ಸುತ್ತ ಗಿರಕಿ ಹೊಡೆಯುವುದು ಇತ್ಯಾದಿ ಪ್ರಾರಂಭವಾಯಿತು.
ಹೀಗೇ ಏಳೆಂಟು ತಿಂಗಳು ಸಾಗಿತು. ಹಲವು ಬಾರಿ ಪ್ರಪೋಸ್ ಮಾಡಬೇಕೆಂದು ಕಾದು ಧೈರ್ಯ ಸಾಲದೆ ವಾಪಸ್ಸಾಗಿದ್ದೆ. ಅಂತೂ ಒಂದು ದಿನ ಪ್ರಪೋಸ್ ಮಾಡಲೇಬೇಕೆಂದು ಸ್ಕೆಚ್ ರೆಡಿ ಮಾಡಿದೆ. ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆಯೇ ಎದ್ದು ರೆಡಿಯಾಗಿ ಅವಳು ಟ್ಯೂಶನ್‌ಗೆ ಹೋಗೋ ದಾರೀಲಿ ಕಾಯ್ತಾ ನಿಂತೆ. ಸೇಫ್ಟಿಗೆ ಯಾರಾದ್ರೂ ಜೊತೆಗಿರಲಿ ಅಂತ ಸ್ನೇಹಿತನೊಬ್ಬನನ್ನು ಕರೆದೊಯ್ದಿದ್ದೆ. ಇಬ್ಬರೂ ಅವಳ ಬರುವಿಕೆಗಾಗಿ ಕಾಯುತ್ತಾ ನಿಂತುಕೊಂಡಿದ್ದೆವು. ನನ್ನ ಎದೆಯಂತೂ ಜೋರಾಗಿ ಬಡಿದುಕೊಳ್ಳುತ್ತಿತ್ತು. ಅವಳು ಸೈಕಲ್‌ನಲ್ಲಿ ಬಂದೇ ಬಿಟ್ಟಳು. ಅವಳು ಬರುತ್ತಿರುವುದನ್ನು ಕಂಡ ನನ್ನ ಸ್ನೇಹಿತ ಸರ್ರನೆ ಓಡಿ ಹೋಗಿ ಮರೆಗೆ ನಿಂತ. ಆಗ ನನ್ನ ಎದೆ ಇನ್ನಷ್ಟು ಜೋರಾಗಿ ಬಡಿದುಕೊಳ್ಳಲು ಪ್ರಾರಂಭವಾಯಿತು. ನಾನು ಕಾಲಿಗೆ ಬುದ್ಧಿ ಹೇಳಲೆ ಎನಿಸಿತು. ಆದರೂ ಹೆದರುತ್ತಲೇ ಧೈರ್ಯ ತೆಗೆದುಕೊಂಡು ನಿಂತೆ.
ನನ್ನ ಬಳಿ ಬರುತ್ತಲೇ ಅವಳ ಹೆಸರು ಕೂಗಿದೆ. ಆ ಕಡೆ, ಈ ಕಡೆ ನೋಡಿದಳು. ಮತ್ತೂಮ್ಮೆ ಕೂಗಿದೆ. ನಿಂತುಕೊಂಡಳು. “ನಿಮ್ಮ ಜೊತೆ ಮಾತನಾಡಬೇಕಾಗಿತ್ತು’ ಎಂದೆ. “ಹೇಳಿ…’ ಎಂದು ಮುಗುಳ್ನಗೆ ಬೀರಿದಳು. ನನಗೆ ಒಂದಿಷ್ಟು ಧೈರ್ಯ ಬಂದಂತಾಯಿತು. “ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲೇನಿದೆ ತಿಳಿಸಿ’ ಎಂದೆ. ಅವಳು “ನಮ್ಮ ಮನೆಯಲ್ಲಿ ತುಂಬಾ ಸ್ಟ್ರಿಕುr, ಲವ್- ಗಿವ್ ಅಂದ್ರೆ ನಮ್ಮಮ್ಮ ಒಪ್ಪಲ್ಲ. ನಾನಿನ್ನೂ ತುಂಬಾ ಕಲಿಬೇಕು. ಸಾಧನೆ ಮಾಡಬೇಕು’ ಎಂದು ಏನೇನೋ ಪುರಾಣವನ್ನೇ ಊದಿದಳು.
ನಾನು ಆ ಕಡೆ-ಈ ಕಡೆ ನೋಡಿ ಸದ್ಯ, ಯಾರೂ ನಮ್ಮನ್ನು ನೋಡಲಿಲ್ಲವಲ್ಲ ಎಂದುಕೊಂಡು, “ಆಯ್ತು ನಿಮಗೆ ಒಳ್ಳೆಯದಾಗಲಿ’ ಅಂತ ಹೇಳಿ ಕಳಚಿಕೊಂಡೆ. ಪ್ರಪೋಸ್ ಮಾಡೋದ್ರಲ್ಲೇನಿದೆ ಮಹಾ, ಹೀಗ್ ಹೋಗಿ ಮೂರ್ ಅಕ್ಷರ ಹೇಳಿ ಬಂದರಾಯಿತು ಎಂದು ನಾನು ಬೇರೆಯವರನ್ನು ಛೇಡಿಸುತ್ತಿದ್ದೆ. ಆದರೆ ನನ್ನ ಸರದಿ ಬಂದಾಗ ಅದರ ಕಷ್ಟ ಅರ್ಥವಾಯಿತು. ಆ ಬಳಿಕ ಯಾವ ಹುಡುಗಿಗೂ ಪ್ರಪೋಸ್ ಮಾಡುವ ಮಹಾನ್ ಕಾರ್ಯಕ್ಕೆ ಕೈ ಹಾಕಿಲ್ಲಪ್ಪಾ! ಗಾಡ್ ಪ್ರಾಮಿಸ್…
– ಮಹಾಂತೇಶ ಜಾಂಗಟಿ, ಹುಬ್ಬಳ್ಳಿ