Advertisement

ಜೊನಾಥನ್‌ ನೃತ್ಯ ಜಾದೂ

11:24 AM Jan 27, 2018 | |

ಹೆಸರು ವಿದೇಶದ್ದಾದರೂ, ಭಾರತಕ್ಕೂ ಇವರಿಗೂ ಬಿಡಿಸಲಾಗದ ನಂಟಿದೆ. ಭಾರತೀಯ ನೃತ್ಯ ಪ್ರಕಾರಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಇವರು, ನ್ಯೂಯಾರ್ಕ್‌ನ “ಬ್ಯಾಟರಿ ಡ್ಯಾನ್ಸ್‌ ಕಂಪನಿ’ಯ ಸ್ಥಾಪಕರು. ತಮ್ಮ ಸಂಸ್ಥೆಯ ಮೂಲಕ, ಜಗತ್ತಿನ ಬೇರೆ ಬೇರೆ ಭಾಗದ ಕಲಾವಿದರನ್ನು ಒಟ್ಟು ಸೇರಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಈ ತಂಡದಲ್ಲಿ ಕನ್ನಡಿಗನ “ಕಾಲ್‌ಚಳಕ’ವನ್ನೂ ಕಾಣಬಹುದು.

Advertisement

ಪ್ರಸ್ತುತ ದಕ್ಷಿಣ ಏಷ್ಯಾ ಪ್ರವಾಸದಲ್ಲಿರುವ ಅವರು, “ಶಕ್ತಿ- ಎ ರಿಟರ್ನ್ ಟು ದ ಸೋರ್ಸ್‌’ ಎಂಬ ವಿಶೇಷ ನೃತ್ಯ ಪ್ರದರ್ಶನ ನೀಡಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. “ಐ ಲವ್‌ ಬೆಂಗಳೂರು’ ಜತೆ ಅವರು ನೃತ್ಯ ಸಂಯೋಜನೆಯ ತಮ್ಮ ಅನುಭವವನ್ನು ಹಂಚಿಕೊಂಡರು. ನ್ಯೂಯಾರ್ಕ್‌ನ ಜೊನಾಥನ್‌ ಹಾಲೆಂಡರ್‌ ಮೂಲತಃ ಬ್ಯಾಲೆ ಹಾಗೂ ಕಂಟೆಂಪರರಿ ನೃತ್ಯಗಾರ. ಭರತನಾಟ್ಯವೂ ಸೇರಿದಂತೆ ಜಗತ್ತಿನ ಅಪರೂಪದ ನೃತ್ಯ ಪ್ರಕಾರಗಳ ಬಗ್ಗೆ ಮೋಹಿತರಾದ ಇವರು, ಆ ಎಲ್ಲ ನೃತ್ಯ ಪ್ರಕಾರಗಳನ್ನು ಮಿಳಿತಗೊಳಿಸಿ ವಿನೂತನ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸುತ್ತಾರೆ.

1976ರಲ್ಲಿ “ಬ್ಯಾಟರಿ ಡ್ಯಾನ್ಸ್‌ ಕಂಪನಿ’ ಸ್ಥಾಪಿಸುವ ಮೂಲಕ ಸಿ.ವಿ. ಚಂದ್ರಶೇಖರ ರಾವ್‌, ಮಲ್ಲಿಕಾ ಸಾರಾಭಾಯಿ, ಮೃಣಾಲಿನಿ ಸಾರಾಭಾಯ್‌, ಜವರಿ ಸಹೋದರಿಯರಿಯರ ನೃತ್ಯ ಸಂಯೋಜಿಸಿದ್ದಾರೆ. ಇಸ್ರೇಲ್‌, ಪ್ಯಾಲೆಸ್ತೀನ್‌, ಇರಾಕ್‌ನಂಥ ಯುದ್ಧಪೀಡಿತ ರಾಷ್ಟ್ರಗಳಲ್ಲೂ ಕಲಾವಿದರನ್ನು ನರ್ತಿಸುವಂತೆ ಮಾಡಿದ ಹೆಗ್ಗಳಿಕೆ ಇವರದ್ದು. ಪ್ರಸ್ತುತ ಬೆಂಗಳೂರಿನಲ್ಲಿ “ಶಕ್ತಿ- ಎ ರಿಟರ್ನ್ ಟು ದ ಸೋರ್ಸ್‌’ ಎಂಬ ವಿನೂತನ ಪ್ರಯೋಗದ ಪ್ರದರ್ಶನ ನಡೆಸಿಕೊಟ್ಟರು.

ಭಾರತದ ನಂಟು…: ಜೊನಾಥನ್‌ ಹಾಲೆಂಡರ್‌ 1968ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಾಗ 16 ವರ್ಷ. ಅಮೆರಿಕನ್‌ ಫೀಲ್ಡ್‌ ಸರ್ವೀಸ್‌ ( ಎಎಫ್ಎಸ್‌ ಎಕ್ಸ್‌ಚೇಂಜ್‌ ಸ್ಟೂಡೆಂಟ್‌) ಮೂಲಕ ಮುಂಬೈಗೆ ಬಂದ ಅವರು, ಸಿದ್ಧಾರ್ಥ್ ಹಾಗೂ ನಿರುಪಮಾ ಮೆಹ್ತಾ ಕುಟುಂಬದವರ ಜೊತೆ ಮೂರು ತಿಂಗಳು ತಂಗಿದ್ದರು.

ನೃತ್ಯಗುರುಗಳಾಗಿದ್ದ ಮೆಹ್ತಾ ಅವರಿಂದಾಗಿ ಭಾರತದ ಪ್ರಸಿದ್ಧ ನೃತ್ಯ ಕಲಾವಿದರನ್ನು ಭೇಟಿ ಮಾಡುವ ಅವಕಾಶ ಅವರದ್ದಾಯ್ತು. ನೃತ್ಯ ಕಲೆಯ ಬಗ್ಗೆ ಆಸಕ್ತಿ ಮೂಡಿದ್ದೇ ಆಗ. ಶಾಸ್ತ್ರೀಯವಾಗಿ ಪಿಯಾನೊ ಕಲಿತಿದ್ದ ಜೊನಾಥನ್‌ ಸಾಹಿತ್ಯ, ಶಿಲ್ಪಕಲೆ, ನಾಟಕ, ಚಿತ್ರಕಲೆಯಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ನೃತ್ಯದ ಕಡೆಗೆ ಜಾಸ್ತಿ ಗಮನ ಕೊಟ್ಟಿರಲಿಲ್ಲ. ಅಮೆರಿಕಕ್ಕೆ ವಾಪಸಾದ ನಂತರ, ತಮ್ಮ 18ನೇ ವಯಸ್ಸಿನಲ್ಲಿ ಅವರು ನೃತ್ಯವನ್ನು ಶಾಸ್ತ್ರೀಯವಾಗಿ ಕಲಿಯಲು ನಿರ್ಧರಿಸಿದರು.

Advertisement

ಭಾರತ ನನ್ನ ಎರಡನೇ ಮನೆ: 70ಕ್ಕೂ ಹೆಚ್ಚು ದೇಶ ಸುತ್ತಿರುವ ಜೊನಾಥನ್‌ಗೆ ಭಾರತ, ಅದರಲ್ಲೂ ಮುಂಬೈ ಎರಡನೇ ಮನೆ ಇದ್ದ ಹಾಗೆ. ಸರಿಯಾಗಿ 50 ವರ್ಷಗಳ ಹಿಂದೆ, ಮುಂಬೈನಲ್ಲಿ ತಂಗಿದ್ದ ದಿನಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಇಲ್ಲಿನ ಸಸ್ಯಾಹಾರದ ಅಡುಗೆಗಳು ಅವರಿಗೆ ಬಹಳ ಇಷ್ಟ. ಇಲ್ಲಿ ಸಿಗುವಷ್ಟು ವೈವಿಧ್ಯಮಯ ಖಾದ್ಯಗಳು ಬೇರೆಲ್ಲಿಯೂ ಸಿಗುವುದಿಲ್ಲ ಎನ್ನುವ ಅವರು, ಸಹ ಕಲಾವಿದ ಉನ್ನತ್‌ ಅವರ ಹಾಸನದ ಮನೆಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದನ್ನು, ಅಲ್ಲಿ ಆದರಾತಿಥ್ಯ ಸ್ವೀಕರಿಸಿದ್ದನ್ನು ಸ್ಮರಿಸಿದರು.

ಕನ್ನಡದ ಉನ್ನತ “ಶಕ್ತಿ’: ಉನ್ನತ್‌ ರತ್ನರಾಜು ಮೂಲತಃ ಹಾಸನದವರು. ಭರತನಾಟ್ಯ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು, ಕಿರಿಯ ವಯಸ್ಸಿನಲ್ಲಿಯೇ ನೃತ್ಯದ ಮೂಲಕ ವಿಶ್ವದ ಗಮನ ಸೆಳೆದು, ಡ್ಯಾನ್ಸ್‌ ಲೈಬ್ರರಿ ತೆರೆದರು. ನೃತ್ಯ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಇತಿಹಾಸ, ಫಿಲಾಸಫಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಒಂದೆಡೆ ಕಲೆ ಹಾಕಿದ್ದಾರೆ. ಜೊನಾಥನ್‌ರ “ಶಕ್ತಿ- ಎ ರಿಟರ್ನ್ ಟು ದ ಸೋರ್ಸ್‌’ ವಿಶೇಷ ನೃತ್ಯದಲ್ಲಿ ಇವರೂ ಒಬ್ಬರು. ಇದಕ್ಕಾಗಿ ಅವರು ಸುಮಾರು 2 ವರ್ಷ ಶ್ರಮಿಸಿದ್ದಾರೆ. ಮುಂಬೈ, ಪುಣೆ, ಬೆಂಗಳೂರು, ಕೋಲ್ಕತ್ತಾ, ದೆಹಲಿ ಹಾಗೂ ಢಾಕಾದಲ್ಲಿ ಇವರ ನೃತ್ಯ ಪ್ರದರ್ಶನ ಕಂಡಿದೆ. 

ನೃತ್ಯಕಲೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಇಲ್ಲಿನ ಕಲೆ- ಸಂಸ್ಕೃತಿಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಆದರೆ, ಅದು ಹೆಚ್ಚಿನ ಜನಕ್ಕೆ ಅರ್ಥವಾಗಿಲ್ಲ. ಒಂದು ಸಿನಿಮಾ ಬಿಡುಗಡೆಯಾದರೆ ನೂರಾರು ರೂಪಾಯಿ ಕೊಟ್ಟು ಟಿಕೆಟ್‌ ತಗೊಂಡು ನೋಡ್ತಾರೆ. ಅಂಥದ್ದೇ ಕ್ರೇಜ್‌, ಭಾರತದಲ್ಲಿನ ನೃತ್ಯ ಕಾರ್ಯಕ್ರಮಗಳ ಬಗ್ಗೆಯೂ ಹುಟ್ಟಬೇಕು ಎಂದು ಆಶಿಸುವೆ.
-ಜೊನಾಥನ್‌ ಹಾಲೆಂಡರ್‌

Advertisement

Udayavani is now on Telegram. Click here to join our channel and stay updated with the latest news.

Next