Advertisement

ವಾರದ ನಂತ್ರ ರಸ್ತೆಯಲ್ಲಿ ಗುಂಡಿ ಇದ್ರೆ ಜೋಕೆ!

11:56 AM Oct 09, 2017 | Team Udayavani |

ಬೆಂಗಳೂರು: ಮಳೆ ಬರಲಿ, ಬಾರದಿರಲಿ, ಮುಂದಿನ ಒಂದು ವಾರದ ನಂತರ ನಗರದ ಯಾವುದೇ ರಸ್ತೆಯಲ್ಲೂ ಒಂದು ಸಣ್ಣ ಗುಂಡಿ ಕೂಡ ಕಾಣಬಾರದು! ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸಂಬಂಧಪಟ್ಟ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ನೀಡಿದ ಎಚ್ಚರಿಕೆ ಇದು.

Advertisement

ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹಾಟ್‌ಮಿಕ್ಸ್‌ನಿಂದ (ಡಾಂಬಾರು ಮಿಶ್ರಣ) ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದೇ ಇದ್ದಲ್ಲಿ, ಕೋಲ್ಡ್‌ ಮಿಕ್ಸ್‌ನಿಂದಲೇ (ಸಿಮೆಂಟ್‌, ಜೆಲ್ಲಿ ಮಿಶ್ರಣ) ಗುಂಡಿಗಳನ್ನು ಮುಚ್ಚಬೇಕು. ಸೋಮವಾರದಿಂದಲೇ ಈ ಕಾರ್ಯ ಆರಂಭಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಭಾನುವಾರ ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು, ಕಳೆದೊಂದು ವರ್ಷದ ಅವಧಿಯಲ್ಲಿ ಯಾವ ಗುತ್ತಿಗೆದಾರರು ಎಲ್ಲಿ, ಎಷ್ಟು ರಸ್ತೆ ಕಾಮಗಾರಿ ನಡೆಸಿದ್ದಾರೆ. ಎಷ್ಟು ರಸ್ತೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ, ಗುತ್ತಿಗೆದಾರರ ಸಂಸ್ಥೆಯ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

“ಗುತ್ತಿಗೆದಾರರ ಕುರಿತು ಅಧಿಕಾರಿಗಳು ನೀಡುವ ವರದಿಯನ್ನು ಬಿಬಿಎಂಪಿ ವೆಬ್‌ಸೈಟ್‌ಗೆ ಹಾಕಲಾಗುವುದು. ಈ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಸಾರ್ವಜನಿಕರಿಂದಲೂ ದೂರುಗಳನ್ನು ಸ್ವೀಕರಿಸಲಾಗುವುದು. ಮುಂದಿನ ಒಂದು ವಾರದಲ್ಲಿ ಪಾಲಿಕೆಯಲ್ಲಿರುವ ಎಲ್ಲ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚದಿದ್ದರೆ, ಲೋಪವೆಸಗಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಮುಚ್ಚದಿರಲು ಕಾರಣವೇನು?: ಘನವಸ್ತು ರೀತಿಯ ಡಾಂಬರನ್ನು ಸುಮಾರು 150 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಕಾಯಿಸಿ ಅದಕ್ಕೆ ಜೆಲ್ಲಿ ಹಾಕಿ ಮಿಶ್ರಣ ಮಾಡಲಾಗುತ್ತದೆ. ಈ ಮಿಶ್ರಣವನ್ನು ಲಾರಿಗಳ ಮೂಲಕ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಸ್ಥಳಕ್ಕೆ ತೆಗೆದುಕೊಂಡ ಬಂದಾಗ ಮಿಶ್ರಣ ಉಷ್ಣಾಂಶ ಕನಿಷ್ಠ 100 ಡಿಗ್ರಿ ಸೆಲ್ಸಿಯಸ್‌ ಇರಬೇಕಾಗುತ್ತದೆ.

Advertisement

ಈ ಮಿಶ್ರಣ ಬಳಿಸಿ ಗುಂಡಿ ದುರಸ್ತಿ ಮಾಡಬೇಕಾದರೆ ಗುಂಡಿ ಸಂಪೂರ್ಣವಾಗಿ ಒಣಗಬೇಕಾಗುತ್ತದೆ. ಇಲ್ಲದಿದ್ದರೆ ಡಾಂಬರು ಸರಿಯಾಗಿ ಕೂಡಿಕೊಳ್ಳದೆ ಕಿತ್ತುಬರುತ್ತದೆ. ಜತೆಗೆ ದುರಸ್ತಿ ನಡೆಸಿದ ನಂತರ ಅದು ಕೂಡಿಕೊಳ್ಳಲು 48 ಗಂಟೆಗಳು ಬೇಕಾಗುತ್ತದೆ. ಒಂದೊಮ್ಮೆ ಮತ್ತೆ ಮಳೆ ಬಂದರೆ ಮಾಡಿದ ಕಾಮಗಾರಿ ವ್ಯರ್ಥವಾಗುತ್ತದೆ. 

ಕೋಲ್ಡ್‌ಮಿಕ್ಸ್‌ ಬಾಳಿಕೆ ಕಡಿಮೆ: ಇನ್ನು ಕೋಲ್ಡ್‌ಮಿಕ್ಸ್‌ನ್ನು ದ್ರವರೂಪದ ಎಮರ್ಷನ್‌ಗೆ (ಸಿಮೆಂಟ್‌) ಜೆಲ್ಲಿ ಹಾಕಿ ಮಿಶ್ರಣ ಮಾಡಲಾಗುತ್ತದೆ. ಗುಂಡಿಯಲ್ಲಿ ಎಷ್ಟೇ ತೇವಾಂಶವಿದ್ದರೂ ಈ ಮಿಶ್ರಣ ಕೇವಲ ಎರಡು ಮೂರು ಗಂಟೆಗಳಲ್ಲಿ ಕೂಡಿಕೊಳ್ಳುತ್ತದೆ. ಆದರೆ, ಹೀಗೆ ಮುಚ್ಚಿದ ಗುಂಡಿಯ ಕಾಲಾವಧಿ ಕೇವಲ ಎರಡು-ಮೂರು ತಿಂಗಳು ಮಾತ್ರ.

ಕ್ರಮೇಣ ಮಿಶ್ರಣ ಕಿತ್ತುಬಂದು ಮತ್ತೆ ಗುಂಡಿಗಳು ಸೃಷ್ಟಿಯಾಗುತ್ತವೆ. ಹಾಗಾಗಿ ಕೋಲ್ಡ್‌ಮಿಕ್ಸ್‌ ಮೂಲಕ ಗುಂಡಿ ಮುಚ್ಚಲು ಆದ್ಯತೆ ನೀಡುತ್ತಿಲ್ಲ. ಒಂದೊಮ್ಮೆ ಮಳೆ ಮುಂದುವರಿದರೆ ಅನಿವಾರ್ಯವಾಗಿ ಕೋಲ್ಡ್‌ಮಿಕ್ಸ್‌ ಬಳಸಿ ಕಾಮಗಾರಿ ನಡೆಸಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸಮಜಾಯಿಷಿ ಒಪ್ಪದ ಆಯುಕ್ತರು: ಸಭೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿರಂತರ ಮಳೆಯ ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ ಪ್ರಸಾದ್‌, ಮಳೆ ಬರಲಿ ಅಥವಾ ಬಾರದಿರಲಿ. ಗುಂಡಿ ಮುಚ್ಚುವ ಹೊಣೆಗಾರಿಕೆಯಿಂದ ವಿನಾಯ್ತಿ ಇಲ್ಲ. ವಾರದ ನಂತರವೂ ಗುಂಡಿಗಳು ಕಂಡುಬಂದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು. ನಗರದ ಎಂಟು ವಲಯಗಳಲ್ಲಿ 1,360 ಕಿ.ಮೀ. ಪ್ರಮುಖ ರಸ್ತೆಗಳಿವೆ.

ಆ ಎಲ್ಲ ರಸ್ತೆಗಳ ವಾರಸುದಾರರು ಆಯಾ ವಲಯಗಳಲ್ಲಿರುವ ಎಂಜಿನಿಯರ್‌ಗಳೇ ಆಗಿದ್ದಾರೆ. ಆ ಪೈಕಿ 500 ಕಿ.ಮೀ. ವಿವಿಧ ಯೋಜನೆಗಳಡಿ ನಿರ್ಮಾಣ ಹಂತದಲ್ಲಿದ್ದರೆ, 400 ಕಿ.ಮೀ. ಇನ್ನೂ “ನಿರ್ವಹಣಾ ಅವಧಿ’ (ಮೆಂಟೇನನ್ಸ್‌ ಪಿರಿಯಡ್‌)ಯಲ್ಲಿವೆ. ಹಾಗಾಗಿ, ಈ ರಸ್ತೆಗಳ ಉಸ್ತುವಾರಿ ಗುತ್ತಿಗೆದಾರರ ಕೆಲಸ. ಉಳಿದದ್ದು ರಸ್ತೆಗಳ ಮೇಲೆ ಹೆಚ್ಚು ನಿಗಾ ವಹಿಸಬೇಕಿದೆ. ಈ ಎಲ್ಲ ರಸ್ತೆಗಳಲ್ಲಿ ಯಾವುದೇ ಗುಂಡಿ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. 

ಇಂದು ಮೇಯರ್‌ ಸಭೆ: ನಗರದಲ್ಲಿ ರಸ್ತೆಗುಂಡಿಗಳ ದುರಸ್ತಿಗೆ ಸಂಬಂಧಿಸಿದಂತೆ ಸೋಮವಾರ ಮೇಯರ್‌ ಆರ.ಸಂಪತ್‌ರಾಜ್‌ ಅಧಿಕಾರಿಗಳೊಂದಿಗೆ ನಡೆಸಲಿದ್ದಾರೆ. ಸಭೆಯಲ್ಲಿ ಗುತ್ತಿಗೆದಾರರು ನಿರ್ವಹಣೆ ಅವಧಿ ಪೂರ್ಣಗೊಳ್ಳದ ರಸ್ತೆಗಳ ಮಾಹಿತಿಯನ್ನು ಅವರು ನೀಡಲಿದ್ದಾರೆ. ನಿರ್ವಹಣಾ ಅವಧಿಯಿದ್ದರೂ, ರಸ್ತೆ ದುರಸ್ತಿ ಮಾಡದ ಗುತ್ತಿಗೆದಾರರಿಗೆ ದಂಡ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ತೀರ್ಮಾನಿಸಲಾಗುತ್ತದೆ.

ಮುಚ್ಚಿದರೂ ಬಾಯ್ತೆರೆಯುತ್ತಿವೆ: ಕಳೆದ 60 ದಿನಗಳಲ್ಲಿ 45 ದಿನ ನಗರದಲ್ಲಿ ಮಳೆಯಾಗಿದೆ. ಇದು ಗುಂಡಿ ಮುಚ್ಚುವ ಕಾರ್ಯ ಮಂದಗತಿಯಲ್ಲಿ ಸಾಗಲು ಪ್ರಮುಖ ಕಾರಣವಾಗಿದೆ.  ಆಗಸ್ಟ್‌ 6ರಿಂದ ಅಕ್ಟೋಬರ್‌ 10ರವರೆಗೆ ಹೆಚ್ಚು-ಕಡಿಮೆ ನಿರಂತರ ಮಳೆಯಾಗಿದೆ. ಒಟ್ಟಾರೆ ದಿನಗಳ ಲೆಕ್ಕಹಾಕಿದರೆ, 60 ದಿನಗಳಲ್ಲಿ 45 ದಿನ ಮಳೆ ಬಿದ್ದಿದೆ. ಮಳೆಯಲ್ಲಿ ಮುಚ್ಚಿದರೂ ಗುಂಡಿಗಳು ಬಾಯೆ¤ರೆಯುತ್ತಿವೆ. ಅಷ್ಟೇ ಅಲ್ಲ, ನಿರಂತರ ಮಳೆಯಿಂದ ಮತ್ತಷ್ಟು ಗುಂಡಿಗಳು ಸೃಷ್ಟಿಯಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

1,400 ಕಿ.ಮೀ. ರಸ್ತೆ; 16 ಸಾವಿರ ಗುಂಡಿಗಳು!: ನಗರದ ಪ್ರತಿ 1 ಕಿ.ಮೀ. ಪ್ರಮುಖ ರಸ್ತೆಯಲ್ಲಿ ಸರಾಸರಿ 11ರಿಂದ 12 ಗುಂಡಿಗಳಿವೆ! ಹೌದು, ನಗರದಲ್ಲಿ 1,360 ಕಿ.ಮೀ. ಪ್ರಮುಖ ರಸ್ತೆಗಳಿವೆ. ಅದರಲ್ಲಿ ಸರಿಸುಮಾರು 16 ಸಾವಿರ ಗುಂಡಿಗಳಿವೆ ಎಂದು ಬಿಬಿಎಂಪಿ ಅಂದಾಜಿಸಿದೆ. ಅಂದರೆ, ಸರಾಸರಿ ಪ್ರತಿ ಕಿ.ಮೀ.ಗೆ 11ರಿಂದ 12 ಗುಂಡಿಗಳು ಬಾಯೆ¤ರೆದಿವೆ. 14 ಸಾವಿರ ಕಿ.ಮೀ. ರಸ್ತೆಗಳಿದ್ದು, ಈ ಪೈಕಿ 1,360 ಕಿ.ಮೀ. ಪ್ರಮುಖ ರಸ್ತೆಗಳಾಗಿವೆ. ಇದರಲ್ಲಿ ನಿರಂತರ ಮಳೆ, ಕಳಪೆ ಕಾಮಗಾರಿ ಮತ್ತಿತರ ಕಾರಣಗಳಿಂದ 16 ಸಾವಿರ ಗುಂಡಿಗಳು ಇವೆ. ಹಿಂದೆಂದಿಗಿಂತ ಈ ಬಾರಿ ಅತ್ಯಧಿಕ ಗುಂಡಿಗಳು ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next