Advertisement

ಜಾಯಿಂಟ್‌ ವೀಲ್‌ ಅಳವಡಿಕೆ: ಜಾತ್ರೆಗೆ ಬಂದು ಸಿಲುಕಿದ ವಲಸೆ ಕಾರ್ಮಿಕರು

10:50 PM May 27, 2020 | mahesh |

ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜಾತ್ರೆಯಲ್ಲಿ ಮನೋರಂಜನೆ ಆಟಕ್ಕಾಗಿ ಜಾಯಿಂಟ್‌ ವೀಲ್‌ ಅಳವಡಿಸಲು ಬಂದಿದ್ದ ಸುಮಾರು 20 ಮಂದಿ ವಲಸೆ ಕಾರ್ಮಿಕರು ಲಾಕ್‌ಡೌನ್‌ನಲ್ಲಿ ಸಿಲುಕಿ 2 ತಿಂಗಳುಗಳು ಕಳೆದಿವೆ. ಮೈಸೂರು, ಹುಣಸೂರಿನ ಮಹಿಳೆಯರು, ಮಕ್ಕಳು ಸಹಿತ 15 ಮಂದಿ ಹಾಗೂ ಮಹಾರಾಷ್ಟ್ರದ 5ಮಂದಿ ಸಂಕಷ್ಟಕ್ಕೆ ಸಿಲುಕಿದವರು. ಸದ್ಯ ಇವರು ದೇವಸ್ಥಾನದ ಎದುರಿನ ಗದ್ದೆಯಲ್ಲಿ ಟೆಂಟ್‌ ನಿರ್ಮಿಸಿ ವಾಸವಾಗಿದ್ದಾರೆ. ಊರಿಗೆ ತೆರಳಲು ಜಿಲ್ಲಾಡಳಿತ ಬಸ್ಸಿನ ವ್ಯವಸ್ಥೆ ಮಾಡಿದರೂ 6 ಲಾರಿಗಳಲ್ಲಿ ಸಾಗಿಸುವಷ್ಟು ಸಾಮಗ್ರಿಗಳು ಇರುವುದರಿಂದ ಸಮಸ್ಯೆಯಾಗಿದೆ. ಹುಣಸೂರಿಗೆ ಲಾರಿಯೊಂದಕ್ಕೆ 13 ಸಾ.ರೂ., ಮುಂಬಯಿಗೆ 22 ಸಾವಿರ ರೂ. ಬಾಡಿಗೆ ಕೇಳುತ್ತಿದ್ದು, ಒಟ್ಟು 90 ಸಾವಿರಕ್ಕೂ ಮಿಕ್ಕಿ ಹಣದ ಆವಶ್ಯಕತೆ ಇದೆ.

Advertisement

ಮಕ್ಕಳು, ಹೆಂಗಸರು ಸಹಿತ 20 ಮಂದಿ ಆಹಾರದ ಸಮಸ್ಯೆ ಎದುರಿಸುತ್ತಿದ್ದ ಸಂದರ್ಭ ದೇವಸ್ಥಾನದಿಂದ ಊಟ ಒದಗಿಸಲಾಗಿದೆ. ಜತೆಗೆ ಸ್ಥಳೀಯ ದಾನಿಗಳು ಹಾಗೂ ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ ಅಗತ್ಯ ವಸ್ತುಗಳನ್ನು ಪೂರೈಸಿದೆ. ಗುಂಪಾಗಿ ರಸ್ತೆ ಬದಿಯ ಡೇರೆಯಲ್ಲಿ ವಾಸಿಸುವ ಇವರಿಗೆ ಕೈ ತೊಳೆಯಲು ಸಾಬೂನು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ಗಳನ್ನು ಮಾನವೀಯ ನೆಲೆಯಲ್ಲಿ ಹಿರಿಯಡಕ ಠಾಣಾ ಪೊಲೀಸ್‌ ಸಿಬಂದಿ ಸಂತೋಷ ಕಾರ್ಕಳ ನೀಡಿದ್ದಾರೆ.

ಕೂಲಿ ಕೆಲಸ
ಎರಡು ತಿಂಗಳುಗಳಿಂದ ಕೆಲಸವಿಲ್ಲದೆ ಇದ್ದ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಪರಿಹಾರ ಕಂಡುಕೊಂಡಿದ್ದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು ಮೀನಿನ ಬಲೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರೆ ಪುರುಷರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡು ನಿತ್ಯದ ಖರ್ಚನ್ನು ನಿಭಾಯಿಸಿದರು.

ಊರಿಗೆ ತೆರಳಲು ಸೂಚನೆ
ಮಳೆಗಾಲ ಶುರುವಾದರೆ ಸಂಭಾವ್ಯ ಸಾಂಕ್ರಾಮಿಕ ರೋಗ, ಅನಾರೋಗ್ಯದಿಂದ ಕಷ್ಟವಾಗಲಿದೆ. ಆದ್ದರಿಂದ ಅಧಿಕಾರಿಗಳು ಶನಿವಾರದೊಳಗೆ ಊರಿಗೆ ತೆರಳಲು ಸೂಚನೆ ನೀಡಿದ್ದು, ಸಂಕಷ್ಟದಲ್ಲಿದ್ದಾರೆ.

ಸರಕಾರದ ಸಹಾಯವಿಲ್ಲ
“ಚಿಕ್ಕ ಮಕ್ಕಳೊಂದಿಗೆ ಕಷ್ಟದಲ್ಲಿ ಜೀವನ ಸಾಗಿಸುವ ನಮಗೆ ಪೆರ್ಡೂರಿನ ಜನತೆಯ ಸಹಕಾರದಿಂದ ಜೀವ ಉಳಿದುಕೊಂಡಿದೆ. ಸ್ಥಳೀಯರಾದ ತುಕಾರಾಮ್‌ ಅವರ ಸಹಾಯ ಹಾಗೂ ದೇವಸ್ಥಾನದ ಊಟ ಹೊರತುಪಡಿಸಿದರೆ ಸರಕಾರದಿಂದ ಬೇರೆ ಯಾವ ಸಹಾಯವೂ ನಮಗೆ ಸಿಗಲಿಲ್ಲ’ ಎಂದು ಕಾರ್ಮಿಕರಲ್ಲೊಬ್ಬರಾದ ಸಾವಿತ್ರಿ ಬಾಯಿ ತಿಳಿಸಿದ್ದಾರೆ.

Advertisement

ಸ್ಪಂದಿಸುವುದು ಅಗತ್ಯ
ಎರಡು ತಿಂಗಳುಗಳಿಂದ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ನಮ್ಮ ಸಂಸ್ಥೆಯ ವತಿಯಿಂದ ಸುಮಾರು 75 ಸಾವಿರಕ್ಕೂ ಅಧಿಕ ಆಹಾರ ಸಾಮಗ್ರಿಗಳನ್ನು ನೀಡಲಾಗಿದೆ. ಮುಂದೆ ಮಳೆಗಾಲ ಬರುವುದರಿಂದ ಆದಷ್ಟು ಶೀಘ್ರ ಇವರನ್ನು ಊರಿಗೆ ಕಳುಹಿಸುವುದು ಉತ್ತಮ. ಈ ಬಗ್ಗೆ ತಹಶೀಲ್ದಾರ್‌ ಅವರಲ್ಲಿ ಮತನಾಡಿದ್ದೇವೆ. ಸರಕು ಸಾಗಿಸಲು ಹಣದ ಆವಶ್ಯಕತೆ ಇರುವುದರಿಂದ ಜಿಲ್ಲಾಡಳಿತ ದಾನಿಗಳ ನೆರವಿನೊಂದಿಗೆ ಸ್ಪಂದಿಸಬೇಕಾಗಿದೆ.
-ತುಕಾರಾಮ್‌ ನಾಯಕ್‌, ಸಂಸ್ಥಾಪಕರು, ವಿ ಲವ್‌ ಹ್ಯುಮ್ಯಾನಿಟಿ ಸಂಸ್ಥೆ, ಪೆರ್ಡೂರು

ಸಹಾಯದ ನಿರೀಕ್ಷೆಯಲ್ಲಿದ್ದೇವೆ
ಊರು ಊರು ಜಾತ್ರೆ ಸುತ್ತಿ ಜೀವನ ಸಾಗಿಸುವ ನಮಗೆ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕಾರಿಗಳು ಬರುವ ಶನಿವಾರದೊಳಗೆ ಜಾಗ ಖಾಲಿ ಮಾಡಲು ಹೇಳಿದ್ದಾರೆ. ಊರಿಗೆ ನಮ್ಮ ಸರಕುಗಳೊಂದಿಗೆ ಸಾಗಲು ಹಣವಿಲ್ಲ. ನಮ್ಮ ಊರಿನವರಿಂದ ಸಾಲ ಕೇಳಿದ್ದೇವೆ. ಕೆಲಸವಿಲ್ಲದೆ ಬದುಕು ಸಾಗಿಸುವುದು ಕಷ್ಟವಾದ್ದ‌ರಿಂದ ಸರಕಾರದ ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ.
-ರವಿ ಹುಣಸೂರು, ಸಂತ್ರಸ್ತ ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next