Advertisement
“ವಸುದೈವ ಕುಟುಂಬಕಂ’ ಎಂಬ ಮಾತು ಕುಟುಂಬದ ಮಹತ್ವವನ್ನು ಸಾರುತ್ತದೆ. ಉತ್ತಮ ಕುಟುಂಬದಿಂದ ಬಂದ ಪ್ರತಿಯೊಬ್ಬನು ಕೂಡ ಕಷ್ಟ,ಸುಖಗಳನ್ನು ತಿಳಿದು ಸಹ ಬಾಳ್ವೆ ನಡೆಸುವುದನ್ನು ತಿಳಿದುಕೊಂಡಿರುತ್ತಾನೆ.
Related Articles
Advertisement
ಕಾಗೆ ಒಂದು ಅನ್ನದ ಅಗುಳು ಕಂಡರೂ ಅದು ತನ್ನ ಎಲ್ಲ ಬಳಗವನ್ನು ಕರೆದು ಬಿಡುತ್ತದೆ. ಅದೇ ರೀತಿ ಮನೆಗೆ ತಂದ ಯಾವುದೇ ಆಹಾರ ವಸ್ತುವನ್ನಾದರೂ ಮನೆಯ ಎಲ್ಲರೂ ಹಂಚಿ ತಿನ್ನುತ್ತಿದ್ದರು. ಜೀವನದಲ್ಲಿ ಏನೇ ಕಷ್ಟ ಸುಖಗಳು ಬಂದರೂ ನಮ್ಮ ಕುಟುಂಬವು ನಮ್ಮೊಂದಿಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬವೇ ಮೊದಲ ಆಸರೆಯಾಗಿರುತ್ತದೆ. ಆ ಮನೆಯಲ್ಲಿ ಹಿರಿಯರಿಗೆ ಪ್ರಧಾನವಾದ ಸ್ಥಾನವಿತ್ತು. ಅವರ ಮಾತನ್ನು ಕೇಳಬೇಕು ಮತ್ತು ಅದಕ್ಕೆ ಹೊಂದಿಕೊಳ್ಳಬೇಕು.
ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗ ತೊಡಗಿವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತಂದೆ, ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳನ್ನು ಇಂದು ಕಾಣಬಹುದು. ತಂದೆ ತಾಯಿಯ ಆಸೆ ಆಕಾಂಕ್ಷೆಗಳಿಗೆ ಇಲ್ಲಿ ಅವಕಾಶವೇ ಇಲ್ಲ .ಅವರ ಕನಸುಗಳು ಕನಸಾಗಿಯೇ ಉಳಿದುಬಿಡುತ್ತದೆ.
ಕಷ್ಟವನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯದೆ ಸಣ್ಣ ಪ್ರಾಯದಲ್ಲೇ ಜೀವವನ್ನು ಕಳೆದುಕೊಂಡ ಎಷ್ಟೋ ಸಂಗತಿಗಳು ಸುತ್ತ ಮುತ್ತ ನಡೆಯುತ್ತದೆ. ತರಾತುರಿಯ ಜೀವನದ ನಡುವೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವಷ್ಟು ಸಮಯವಿಲ್ಲದೆ ಕೇವಲ ಯಂತ್ರಗಳಂತೆ ಬದುಕುವ ಪ್ರಸಂಗವೇ ಹೆಚ್ಚು. ಚೆನ್ನಾಗಿ ಕಲಿತು ಪಟ್ಟಣಗಳಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡವರು ಅನಿವಾರ್ಯವಾಗಿ ಅಲ್ಲಿಯೇ ನೆಲೆಯೂರಬೇಕಾಯಿತು. ಇಂದಿನ ಮನೆಗಳು ದೊಡ್ಡದಾಗಿದ್ದರೂ ಮನಸ್ಸುಗಳು ಚಿಕ್ಕದಾಗುತ್ತಿವೆ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳದೆ ಗಂಭೀರವಾಗಿಯೇ ಇರುತ್ತಾರೆ. ಒಬ್ಬೊಬ್ಬರು ಒಂದೊಂದು ಕೊಠಡಿಯಲ್ಲಿ ತಮ್ಮ ಪಾಡಿಗೆ ತಾವಿರುತ್ತಾರೆ. ಹೀಗಿರುವಾಗ ಅವರ ಜೀವನ ಪೂರ್ತಿ ಕೊಠಡಿಯ ಒಳಗೆಯೇ ಕಳೆದುಹೋಗುತ್ತದೆ.
ಇಂದು ಪಟ್ಟಣದಲ್ಲಿ ವಾಸಿಸುವ ಕುಟುಂಬಗಳಲ್ಲಿ ಪರಸ್ಪರ ಮಾತು ಭೇಟಿ ಎಲ್ಲವೂ ಮೊಬೈಲೊಂದಕ್ಕೆ ಸೀಮಿತವಾಗಿದೆ. ಪಕ್ಕದ ಮನೆಯಾತ ಬದುಕಿರುವನೋ ಇಲ್ಲವೋ ಎಂಬುದೇ ತಿಳಿಯುವುದಿಲ್ಲ. ಕುಟುಂಬದ ವ್ಯಾಪ್ತಿ ಸಣ್ಣದಾಗಿ ಅಣುಕುಟುಂಬಕ್ಕೆ ಸೀಮಿತವಾಗಿದೆ. ಎಲ್ಲರೂ ಯಾಂತ್ರಿಕವಾಗಿ ಬದುಕು ಸಾಗಿಸುತ್ತಾರೆ. ಕೂಡಿ ಬಾಳಬೇಕಾದ ಸಹೋದರ ಸಂಬಂಧ ಆಸ್ತಿಪಾಸ್ತಿಗಾಗಿ ಹೊಡೆದಾಡುತ್ತಿದೆ.ಹೆತ್ತ ತಾಯಿಯ ರೋಧನ ಮುಗಿಲು ಮುಟ್ಟಿದೆ. ಮೌಲ್ಯಗಳಿಗೆ ಮೌಲ್ಯವೇ ಇಲ್ಲದಂತಾಗಿದೆ. ಹಿಂದೆ ಕಳೆದ ಕಾಲವನ್ನು ಇಂದು ನೆನೆದಾಗ ಕನಸಿನಂತೆ ಭಾಸವಾಗುತ್ತದೆ.ಎಲ್ಲವೂ ಕ್ಷಣಮಾತ್ರದ ಬದಲಾವಣೆ.
ಅದಕ್ಕೆ ಒಗ್ಗಲು ಮನಸ್ಸು ಕೇಳುತ್ತಿಲ್ಲ.ಆದರೆ ಕಳೆದ ಕಾಲ ಮತ್ತೆ ಬರಲಂತೂ ಸಾಧ್ಯವಿಲ್ಲ. ಒಬ್ಬರನ್ನೊಬ್ಬರು ಅರಿತರೆ ಬಾಳು ಬಂಗಾರವಾಗುತ್ತದೆ.
- ಪವಿತ್ರಾ ಎಡನೀರು, ಕೆಯುಟಿಇಸಿ, ಚಾಲ, ಕಾಸರಗೋಡು