ಮೈಸೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಹಳೆ ಮೈಸೂರು ಪ್ರಾಂತ್ಯದಲ್ಲಿ ಏ.8ರಂದು ನಾನು ಹಾಗೂ ಎಚ್ .ಡಿ.ದೇವೇಗೌಡ ಅವರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್-ಕಾಂಗ್ರೆಸ್ ಸಚಿವರು, ಮುಖಂಡರ ಸಭೆ ಕರೆಯಲು ನಾನೇ ಹೇಳಿದ್ದೆ, ಸಾ.ರಾ. ಮಹೇಶ್ ಜೊತೆಯೂ ಮಾತನಾಡಿದ್ದೆ,
ಸಭೆಗೆ ಬರುತ್ತೇನೆ ಎಂದಿದ್ದವರು ಬಂದಿಲ್ಲ, ಸಭೆಗೆ ಬಾರದೇ ಇರುವವರ ಬಗ್ಗೆ ಹೊರ ವ್ಯಾಖ್ಯಾನ ಕಲ್ಪಿಸುವ ಅಗತ್ಯವಿಲ್ಲ ಎಂದು ಸಭೆಗೆ ಬಾರದ ಜೆಡಿಎಸ್ ನಾಯಕರಿಗೆ ಸಿದ್ದರಾಮಯ್ಯ ಕುಟುಕಿದರು. ಬಿಜೆಪಿ ಸೋಲಿಸುವುದೇ ನಮ್ಮ ಎರಡೂ ಪಕ್ಷಗಳ ಗುರಿಯಾಗಿರಬೇಕು.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ದೇವೆ. ಹಳೆಯದನ್ನೆಲ್ಲಾ ಮರೆತು ನಾವು ಒಂದಾಗಬೇಕಿದೆ. ನಿನ್ನೆ, ಮೊನ್ನೆ, ಹಳೇಯದನ್ನೆಲ್ಲಾ ಮರೆತು ಒಂದಾಗಿ ಎಂದರು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ನಾವು ಪ್ರಬಲವಾಗಿದ್ದೇವೆ.
ಇದನ್ನು ನಾನು ಉತ್ಪ್ರೇಕ್ಷೆಗೆ ಹೇಳುತ್ತಿಲ್ಲ, ಎರಡೂ ಪಕ್ಷಗಳವರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಪ್ರತಾಪ್ ಸಿಂಹ ನಂತಹ ಸಾಮಾನ್ಯ ಅಭ್ಯರ್ಥಿ ವಿರುದ್ಧ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಆರ್.ಲಿಂಗಪ್ಪ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಮಹಾ ನಗರಪಾಲಿಕೆಗೆ 100 ಕೋಟಿ ರೂ. ಅನುದಾನ ಕೊಟ್ಟರು. ಇದರಿಂದ ನಗರದಲ್ಲಿರುವ ರಸ್ತೆಗಳು, ಪಾರ್ಕ್‌ಗಳು, ಫುಟ್‌ಪಾತ್‌ಗಳು ಅಭಿವೃದ್ಧಿ ಕಂಡಿವೆ. ಉಭಯ ಪಕ್ಷಗಳ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡೋಣ ಎಂದು ಮನವಿ ಮಾಡಿದರು.