ಕಲಬುರಗಿ: ಕ್ಷಯರೋಗ ಗುಣಮುಖ ಆಗುವಂತದ್ದು. ಕ್ಷಯ ಖಚಿತವಾಗಿರುವ ರೋಗಿಗಳು ಸರಿಯಾದ ಚಿಕಿತ್ಸೆ ಪಡೆಯಬೇಕು. ಜತೆಗೆ ರೋಗ ಲಕ್ಷಣ ಇರುವ ಯಾವುದೇ ವ್ಯಕ್ತಿ ಕಂಡು ಬಂದರೆ ಅವರಿಗೆ ಸೂಕ್ತ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕೆಂದು ಜಿಲ್ಲಾ ಕ್ಷಯರೋಗ ಡಿಪಿಸಿ ಅಬ್ದುಲ್ ಜಬ್ಬರ್ ಹೇಳಿದರು.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಪುರ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ’ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷಯರೋಗ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಸಮುದಾಯದ ಜನರಿಗೆ ಕ್ಷಯರೋಗ ಕುರಿತು ಅರಿವು ಮಾಹಿತಿ ನೀಡಬೇಕು. ಅಂದಾಗ ಮಾತ್ರ ರೋಗ ತಡೆಯಲು ಸಾಧ್ಯ. ಕ್ಷಯರೋಗ ನಿರ್ಮೂಲನೆಗೆ ಸರ್ಕಾರ ಈ ಮಹತ್ವದ ಕಾರ್ಯಕ್ರಮ ಕೊಂಡಿದೆ. ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಎಂಬ ಘೋಷವಾಕ್ಯದಂತೆ 2025ರ ಒಳಗೆ ಕ್ಷಯರೋಗ ನಿರ್ಮೂಲನೆಗೆ ಜನರು ಪಣ ತೊಡಬೇಕು ಎಂದರು.
ತಾಲೂಕು ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಕುಮಾರ ಭಾಗೋಡಿ ಮಾತನಾಡಿ, ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ, ಹಲಕಟ್ಟ, ಲಾಡ್ಲಪುರ ಗ್ರಾಮಸ್ಥರಿಗೆ ಕ್ಷಯರೋಗದ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಅರಿವು ಮೂಡಿಸಬೇಕು. ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿಯೊಬ್ಬರು ಎಚ್ಚರವಹಿಸಬೇಕೆಂದು ಹೇಳಿದರು. ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಆರು ತಿಂಗಳ ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂಧ ಮಾಸಿಕ 500ರೂ. ಭತ್ಯೆ ಕೊಡಲಾಗುತ್ತದೆ. ಇದರ ಉಪಯೋಗವನ್ನು ಪ್ರತಿ ರೋಗಿಯೂ ಪಡೆದು ಗುಣಮುಖವಾಗಬೇಕು ಎಂದರು.
ಇದೇ ಸಂದಭದಲ್ಲಿ ಕ್ಷಯರೋಗ ಕುರಿತು ಮಾಹಿತಿ ನೀಡಿ, ಭಿತ್ತಿ ಪತ್ರ ಮೂಲಕ ಜಾಗೃತಿ ಮೂಡಿಸಲಾಯಿತು. ತಾಲೂಕು ಕಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ವಿರೂಪಾಕ್ಷಯ್ಯ ಸ್ವಾಮಿ, ಕಿರಿಯ ನೀರಿಕ್ಷಣಾಧಿಕಾರಿ ಮೌನೇಶ್ ಪತ್ತಾರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಅಂಜು ಚವ್ಹಾಣ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.