Advertisement

ವೀರ ಯೋಧರ ಮಾಹಿತಿ ಪಠ್ಯದಲ್ಲಿ ಸೇರಲಿ

01:05 PM Dec 30, 2017 | |

ಔರಾದ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವೀರ ಯೋಧರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಂತದ ಪಠ್ಯಪುಸ್ತಕಗಳಲ್ಲಿ ಪಾಠ ಸೇರಿಸಿ ಸರ್ಕಾರ ಮಕ್ಕಳಲ್ಲಿ ದೇಶಾಭಿಮಾನ ಹೆಚ್ಚಿಸಬೇಕೆಂದು ಹಿರಿಯ ಸಾಹಿತಿ ಪ್ರಭುಶೆಟ್ಟಿ ಸೈನಿಕಾರ ಹೇಳಿದರು.
 
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೀದರನ ನೆಹರೂ ಯುವ ಕೇಂದ್ರ ವತಿಯಿಂದ
ಆಯೋಜಿಸಲಾಗಿದ್ದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣ ಕುರಿತು ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಉದ್ಘಾಟಿಸಿ
ಅವರು ಮಾತಾಡಿದರು. ಆಧುನಿಕ ಯುಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಂತೆ ಮಕ್ಕಳಲ್ಲಿ ರಾಷ್ಟ್ರಪ್ರೇಮ, ದೇಶಭಕ್ತಿ ಹೆಚ್ಚಿಸುವ ಕೆಲಸ ಇಂದಿನ ದಿನಗಳಲ್ಲಿ ನಡೆಯಬೇಕಿದೆ ಎಂದರು.

Advertisement

ನಮ್ಮ ಹಿರಿಯರು ನಮಗಾಗಿ ಉಳಿಸಿ ಬೆಳೆಸಿದ ದೇಶದ ಶ್ರೀಮಂತ ಸಂಸ್ಕೃತಿ ಪರಂಪರೆ, ಇತಿಹಾಸವನ್ನು ಯುವ
ಪೀಳಿಗೆಗೆ ತಿಳಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು. 

ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ವೆಂಕಟೇಶ ಮಾತನಾಡಿ, ದೇಶದ ಅಭಿವೃದ್ಧಿಗೆ ನಿಸ್ವಾರ್ಥ ಭಾವನೆಯಿಂದ
ದುಡಿಯಲು ನಾವು ಮುಂದಾಗಬೇಕು. ಆಗ ಮಾತ್ರ ಪುಣ್ಯಭೂಮಿಯಲ್ಲಿ ಜನ್ಮ ತಾಳಿದಕ್ಕೂ ಸಾರ್ಥಕವಾಗುತ್ತದೆ ಎಂದರು. 

ಇಂದಿನ ಯುಗದ ಕಾಲೇಜು ಯುವಕರು ದೇಶಪ್ರೇಮ, ಇತಿಹಾಸ, ನಾಡು-ನುಡಿಯ ಸಂರಕ್ಷಣೆ ಮಾಡಲು ಮುಂದಾಗದೇ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರಾದೃಷ್ಟದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ದತ್ತು ಡೊಂಗರೆ, ಡಾ| ಪುಷ್ಪಾಂಜಲಿ, ದತ್ತು ಮಡಿವಾಳ ಮಾತಾಡಿದರು. ಕಾಲೇಜಿನ ಪ್ರಾಚಾರ್ಯ ಸೂರ್ಯಕಾಂತ
ಚಿದ್ರೆ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಕಾರ್ಯಕರ್ತ ರಿಯಾಜಪಾಶಾ ಕೊಳ್ಳುರ ಇದ್ದರು.

Advertisement

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಅಮರೇಶ್ವರ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾಷಣ ಸ್ಪರ್ಧೆಯಲ್ಲಿ ಸಲಿಂ ಇಟಗ್ಯಾಳ ಪ್ರಥಮ ಸ್ಥಾನ, ಎಂ.ಡಿ. ಫಯಾಜ ದ್ವಿತೀಯ, ಸಫìರಾಜ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next