ಬೆಂಗಳೂರು: ಗಣಪತಿ ಹಬ್ಬಕ್ಕೆ ಚಂದಾ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ನಾಲ್ವರು ದುಷðರ್ಮಿಗಳು ಉದ್ಯಮಿ ಸೇರಿ ಇಬ್ಬರಿಗೆ ಚಾಕುನಿಂದ ಇರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಯಲಹಂಕದ ಮಾರುತಿನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಯಲಹಂಕದ ಮಾರುತಿ ನಗರದ ಪ್ರಾಣೇಶ್ ಸಹಾನಿ (34), ಗೋಪಾಲ ಶರ್ಮಾ (37) ಇರಿತಕ್ಕೊಳಗಾದವರು. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣೇಶ್ ಸಹಾನಿ ಯಲಹಂಕದಲ್ಲಿ ಕಾರ್ಖಾನೆ ಹೊಂದಿದ್ದು, ಗೋಪಾಲ ಶರ್ಮಾ ಈ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಾಣೇಶ್ ಸಹಾನಿ ಹಿನ್ನೆಲೆ ತಿಳಿದುಕೊಂಡಿದ್ದ ವ್ಯಕ್ತಿಗಳೇ ಕೃತ್ಯವೆಸಗಿದ್ದಾರೆ.
ಆರೋಪಿಗಳ ಪೈಕಿ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಇನ್ನುಳಿದ ಮೂವರಿಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು. ಸೋಮವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ಗಣಪತಿ ಹಬ್ಬದ ಚಂದಾ ವಸೂಲಿ ಮಾಡುವ ನೆಪದಲ್ಲಿ ಉದ್ಯಮಿ ಪ್ರಾಣೇಶ್ ಸಹಾನಿ ಮನೆಗೆ ಬಂದಿದ್ದಾರೆ.
ಬಳಿಕ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣೇಶ್‌ರನ್ನು ಕುರ್ಚಿಯಲ್ಲಿ ಕೂರಿಸಿ ಕೈ, ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಅಲ್ಮೆರಾದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಆರೋಪಿಗಳನ್ನು ತಡೆಯಲು ಯತ್ನಿಸಿದಾಗ ಪ್ರಾಣೇಶ್ ಎದೆ ಭಾಗಕ್ಕೆ ಚಾಕುನಿಂದ ಇರಿದಿದ್ದಾರೆ. ಇದೇ ವೇಳೆ ಮನೆಯೊಳಗೆ ಬರುತ್ತಿದ್ದ ಶರ್ಮಾ ಅವರ ಕಾಲು ಮತ್ತು ತೊಡೆ ಭಾಗಕ್ಕೆ ಚಾಕುನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿತ: ಇಬ್ಬರ ಚೀರಿಟ ಕೇಳಿದ ಸ್ಥಳೀಯರು ಮನೆ ಬಳಿ ಬಂದಾಗ ನಾಲ್ವರ ಪೈಕಿ ಮೂವರು ಆರೋಪಿಗಳು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಮನೆ ಪಕ್ಕದ ವಿದ್ಯುತ್ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಇಬ್ಬರನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೃತ್ಯವೆಸಗಿದ ದುಷ್ಕರ್ಮಿಗಳು ಕೇವಲ ದರೋಡೆ ಬಂದಿದ್ದರೆ ಅಥವಾ ವೈಯಕ್ತಿಕ ದ್ವೇಷದಿಂದ ಹತ್ಯೆಗೈಯಲು ಬಂದಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.