Advertisement

ದುರಾಡಳಿತ ಶಮನಕ್ಕೆ ಕೈಜೋಡಿಸಿ: ನ್ಯಾ|ವಿಶ್ವನಾಥ ಶೆಟ್ಟಿ

08:00 AM Sep 04, 2017 | Team Udayavani |

ಮಂಗಳೂರು: ರಾಜ್ಯದಲ್ಲಿನ ದುರಾಡಳಿತವನ್ನು ನಿರ್ಣಾಮ ಮಾಡಲು ಲೋಕಾಯುಕ್ತ ಸಂಸ್ಥೆಯ ಜತೆ ಸಾರ್ವಜನಿಕರು ಸಹಕರಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ಜಾಗತಿಕ ಬಂಟ ಪ್ರತಿಷ್ಠಾನದ ವತಿಯಿಂದ ನಿಟ್ಟೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿನಯ ಹೆಗ್ಡೆ ಅವರಿಗೆ ನಗರದಲ್ಲಿ ರವಿವಾರ ಆಯೋಜಿಸಿದ್ದ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯ ಹಿಂದೆ ಸಮಾಜದ ಕೊಡುಗೆಯಿದೆ. ಇದನ್ನು ಮನಗಂಡು ಸಮಾಜದ ಒಳಿತಿಗಾಗಿ ಶ್ರಮಿಸುವುದು ಪ್ರತಿಯೊಬ್ಬನ ಕರ್ತವ್ಯ ಎಂದರು.

ಸಮಾಜದಲ್ಲಿ ಮಾಡಿದ ಉತ್ತಮ ಕೆಲಸವನ್ನು ಗುರುತಿಸುವುದರಿಂದ ಮತ್ತಷ್ಟು ಕೆಲಸ ನಿರ್ವಹಿಸಲು ಪ್ರೇರಣೆ ಸಿಗುತ್ತದೆ. ಸಾಧನೆ ಮಾಡಬೇಕೆನ್ನುವವರಿಗೆ ಸ್ಫೂರ್ತಿಯಾಗುತ್ತದೆ. ಸಮಾಜದಲ್ಲಿ ಒಳ್ಳೆಯ ವಿಚಾರದ ಜತೆ ಕೆಟ್ಟ ವಿಚಾರಗಳೂ ತುಂಬಿಕೊಂಡಿವೆ. ಒಳ್ಳೆಯ ವಿಚಾರಗಳನ್ನು ಸ್ವೀಕರಿಸಿದರೆ ತತ್‌ಕ್ಷಣ ಯಶಸ್ಸು ಸಿಗದಿದ್ದರೂ ಖಂಡಿತವಾಗಿಯೂ ಆತ ಜಯಶಾಲಿಯಾಗುತ್ತಾನೆ. ಕೆಟ್ಟ ವಿಚಾರಗಳಿಂದ ತತ್‌ಕ್ಷಣಕ್ಕೆ ಯಶಸ್ಸು ಸಿಕ್ಕರೂ ಅದರ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿನಯ ಹೆಗ್ಡೆ ಮಾತನಾಡಿ, ಜೀವನದಲ್ಲಿ ಎತ್ತರದ ಸ್ಥಾನಕ್ಕೆ ತಲುಪಿದ ಮೇಲೆ ಜಗತ್ತು ನಮ್ಮಿಂದಲೇ ನಡೆಯುತ್ತಿದೆ ಎಂಬ ಭಾವನೆ ಅನೇಕರಲ್ಲಿ ಬೆಳೆಯುತ್ತದೆ. ಇದು ತಪ್ಪು. ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಬಾಳಲು ಕಲಿಯಬೇಕು. ಜೀವನದಲ್ಲಿ ಎತ್ತರಕ್ಕೆ ಬೆಳೆದಷ್ಟು ಸಮಾಜಕ್ಕೆ ಸಹಕಾರ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿ, ಸಿ.ಎ. ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾದ ವಿಖ್ಯಾತ್‌ ರೈ ಅವರನ್ನು ಸಮ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಬಿ. ಸಚ್ಚಿದಾನಂದ ಶೆಟ್ಟಿ, ಉಪಾಧ್ಯಕ್ಷರಾದ ಸುಧಾಕರ ಎಸ್‌. ಹೆಗ್ಡೆ, ಎ.ಜೆ. ಶೆಟ್ಟಿ, ರೀತಾ ಶೆಟ್ಟಿ, ಕಾರ್ಯದರ್ಶಿ ಕೆ.ಎಂ. ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next