ಬೀದರ: ನರೇಂದ್ರ ಮೋದಿಯವರು ಈ ದೇಶ ಕಂಡ ಅಪರೂಪದ ಪ್ರಧಾನ ಮಂತ್ರಿಯಾಗಿದ್ದು, ನಮಗೆಲ್ಲರಿಗೂ ಹೆಮ್ಮೆಪಡುವ ಸಂಗತಿಯಾಗಿದೆ. ಅಭಿವೃದ್ಧಿಯೇ ಮೂಲ ಮಂತ್ರವನ್ನಾಗಿಸಿಕೊಂಡು ಶ್ರಮಿಸುತ್ತಿರುವ ಪ್ರಧಾನಮಂತ್ರಿ ಅವರೊಟ್ಟಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಕರೆ ನೀಡಿದರು.
ನಗರದ ಸರಸ್ವತಿ ಶಾಲೆ ಆವರಣದಲ್ಲಿ “ಸೇವಾ ಪಾಕ್ಷಿಕ’ ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ಅಂಗವಾಗಿ ಬಿಜೆಪಿ ನಗರ ಮಂಡಲ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ವತಿಯಿಂದ ಹಮ್ಮಿಕೊಂಡ ಉಚಿತ ಆರೋಗ್ಯ ಹಾಗೂ ದಂತ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೋರೊಗ ತಜ್ಞ ಡಾ| ಅಭಿಜಿತ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ನಿಯಮಿತವಾದ ಹಾಗೂ ಶಿಸ್ತುಬದ್ದವಾದ ಜೀವನ ನಡೆಸಬೇಕು. ಜತೆಗೆ ಸಾಮಾನ್ಯ ಮಾನಸಿಕ ಕಾಯಿಲೆಗಳನ್ನು ಹೇಗೆ ನಿಭಾಯಿಸಿ ಕೊಳ್ಳಬೇಕು ಎಂಬುದನ್ನು ಕೂಡ ಅರಿತುಕೊಂಡು ಬದುಕಬೇಕು ಎಂದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಪ್ರೊ| ಎಸ್.ಬಿ. ಸಜ್ಜನಶೆಟ್ಟಿ, ನಗರಸಭೆ ಸದಸ್ಯರಾದ ನೀತಿನ ಕರ್ಪೂರ, ಸುಭಾಷ ಮಡಿವಾಳ, ಗಣೇಶ ಭೊಸ್ಲೆ, ದಂತ ವೈದ್ಯ ಡಾ| ಕಪಿಲ್ ಪಾಟೀಲ, ಮಹಿಳಾ ತಜ್ಞರಾದ ಡಾ| ಸುಪ್ರಿಯಾ, ಡಾ| ಸಿದ್ದನಗೌಡ ಪಾಟೀಲ, ಪ್ರಮುಖರಾದ ರಾಜಕುಮಾರ ನೆಮತಬಾದ, ರೋಷನ್ ವರ್ಮಾ, ಗುರುನಾಥ ರಾಜಗೀರಾ, ಶಶಿಧರ ಆನಂದಮಠ, ಸಂಜಯ, ನರೇಶ ಗೌಳಿ, ಸಂದೀಪ ಪಾಟೀಲ, ನೀತಿನ ನವಲಕೆಲೆ, ಹೇಮಲತಾ ಜೋಷಿ ಇತರರಿದ್ದರು. ವೈದ್ಯಕೀಯ ಪ್ರಕೋಷ್ಟದ ಸೂರ್ಯಕಾಂತ ಸ್ವಾಗತಿಸಿದರು. ಬಾಲಾಜಿ ನಿರೂಪಿಸಿದರು. ಶಿವಪುತ್ರ ವಂದಿಸಿದರು.