ಬಳ್ಳಾರಿ: ಮಕ್ಕಳಲ್ಲಿ ದಿಪ್ತಿರಿಯಾ (ಗಂಟಲುಮಾರಿ) ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡಿಪಿಟಿ ಮತ್ತು ಟಿಡಿ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ಎಚ್.ಎಲ್.ಜನಾರ್ಧನ ಹೇಳಿದರು.
ಇಲ್ಲಿನ ರಾಜ್ಯೋತ್ಸವ ನಗರದ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿನ 5-6 ವರ್ಷದೊಳಗಿನ 1ನೇ ತರಗತಿಯ 56970 ಮಕ್ಕಳಿಗೆ ಡಿಪಿಟಿ ಲಸಿಕೆಯನ್ನು ಹಾಗೂ 10 ರಿಂದ 11 ವರ್ಷದೊಳಗಿನ 5 ನೇ ತರಗತಿಯ 62864 ಮಕ್ಕಳಿಗೆ ಹಾಗೂ 15 ರಿಂದ 16 ವರ್ಷದೊಳಗಿನ 10 ನೇ ತರಗತಿಯ 62328 ಮಕ್ಕಳಿಗೆ ಟಿಡಿ ಲಸಿಕೆ ಹಾಕಿಸುವ ಗುರಿ ಹಾಕಿಕೊಳ್ಳಲಾಗಿದ್ದು, ತಪ್ಪದೆ ಮಕ್ಕಳಿಗೆ ಈ ಲಸಿಕೆ ಹಾಕಿಸುವ ಮೂಲಕ ಮಕ್ಕಳಿಗೆ ಮಾರಕವಾಗುವ ದಿಪ್ತಿರಿಯಾ (ಗಂಟಲುಮಾರಿ) ರೋಗವನ್ನು ನಿಯಂತ್ರಿಸಬೇಕು ಎಂದರು.
ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆಗಳನ್ನು ಕೈಗೊಂಡಿದ್ದು, ಶಾಲೆಗಳು ಆರಂಭವಾಗದ ಹಿನ್ನಲೆಯಲ್ಲಿ ಪ್ರಸ್ತುತ ಶಿಕ್ಷಣ ಇಲಾಖೆ ನಿರ್ವಹಿಸುತ್ತಿರುವ ವಠಾರ ಶಾಲೆಗಳಲ್ಲಿ ಅಂಗವಾಡಿಗಳಲ್ಲಿ ಮತ್ತು ಸಮುದಾಯ ಭವನಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರ ಮೂಲಕ ಲಸಿಕೆಯನ್ನು ಹಾಕಲಾಗುತ್ತಿದೆ. ಆಶಾಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿದಾಗ ಲಸಿಕೆ ಹಾಕಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಆರ್.ಅನಿಲ್‌ಕುಮಾರ ಮಾತನಾಡಿ, ಇಂದಿನಿಂದ ಅ. 17 ರವರೆಗೆ ಜರುಗುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಎಲ್ಲ ಗ್ರಾಮಗಳಲ್ಲಿ ಔಟ್‌ರಿಚ್ ಲಸಿಕಾ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಎಲ್ಲ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಬ್ಲೂಎಚ್‌ಒ ಅಧಿಕಾರಿ ಡಾ| ಆರ್. ಎಸ್.ಶ್ರೀಧರ, ವೈದ್ಯಾಧಿಕಾರಿ ಡಾ| ಸೌಜನ್ಯ, ಡಿಎನ್‌ಓ ಸರೋಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಸೇರಿದಂತೆ ಪಾಲಕರು ಹಾಗೂ ಮತ್ತು ಮಕ್ಕಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.