ಚಿಕ್ಕಬಳ್ಳಾಪುರ: ಮನೆ ಬಾಗಿಲಿಗೆ ತೆರಳಿ ಕ್ಷಯರೋಗ ಪತ್ತೆ ಹಚ್ಚುವ ಜೊತೆಗೆ ಅದನ್ನು ನಿರ್ಮೂಲನೆ ಮಾಡುವಲ್ಲಿ ರಾಜ್ಯ ಸರ್ಕಾರ ಆ.15ರವರೆಗೆ ಎಲ್ಲಾ ಜಿಲ್ಲೆಯಲ್ಲಿ ಸಕ್ರಿಯ ಆಂದೋಲನವನ್ನು ಇತ್ತೀಚಿಗೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ 11 ಸದಸ್ಯರ ಜೆಎಸ್‌ಎಸ್ ತಂಡವು ಚಿಕ್ಕಬಳ್ಳಾಪುರಕ್ಕೂ ಭೇಟಿ ನೀಡಿತ್ತು.
ನಗರ ಹೊರವಲಯದ ಜಿಪಂ ಮಿನಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಾ ಕಾರ್ಯಕ್ರಮವನ್ನು ಜೆ.ಎಸ್.ಎಸ್ ತಂಡವು ಉದ್ಘಾಟಿಸಿ, ನಂತರ ಜಿಲ್ಲೆಯ ಕ್ಷಯರೋಗ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ಮೂಲಕ ಪ್ರಗತಿ ಪರಿಶೀಲನೆ ನಡೆಸಿತು.
ಕ್ಷಯ ರೋಗ ಕೊನೆಗಾಣಿಸಿ: ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸುವ ಮೂಲಕ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ತಂಡದ ಸದಸ್ಯ ಡಾ. ರಾಜೇಂದ್ರ ಪಿ.ಜೋಶಿ, 2025ರ ವೇಳೆಗೆ ಕ್ಷಯ ರೋಗವನ್ನು ದೇಶದಲ್ಲಿ ಕೊನೆಗಾಣಿಸಿ ಕ್ಷಯಮುಕ್ತ ಭಾರತ ಎಂದು ಘೋಷಿಸುವ ಗುರಿಯನ್ನು ಹೊಂದಲಾಗಿದೆ. ಎಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಫ ಪರೀಕ್ಷಿಸಿಕೊಳ್ಳಲು ಸಲಹೆ ನೀಡಿ: ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚಲು ಆರೋಗ್ಯ ಇಲಾಖೆಯು ಮತ್ತಷ್ಟು ಅರಿವು ಮೂಡಿಸುವ ಚಟುವಟಿಕೆಗಳನ್ನು ರೂಪಿಸಬೇಕು. ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರ್ಕಾರಿ ಆಸ್ಪತ್ರೆಗೆ ಬಂದು, ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೆಚ್ಚು ಅರಿವು ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕ್ಷಯಮುಕ್ತ ರಾಜ್ಯವನ್ನಾಗಿಸೋಣ: ಎಲ್ಲರೂ ಒಗ್ಗೂಡಿ ಕ್ಷಯ ರೋಗದ ವಿರುದ್ಧ ಹೋರಾಟ ನಡೆಸಿ, ಕರ್ನಾಟಕವನ್ನು ಕ್ಷಯಮುಕ್ತ ರಾಜ್ಯವನ್ನಾಗಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜೊತೆಗೆ ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಅಥವಾ ನಿಕ್ಷಯ್ ಸಹಾಯವಾಣಿ 1800116666ಕ್ಕೆ ಕರೆ ಮಾಡಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಜೆಎಸ್‌ಎಸ್ ತಂಡದ ಸದಸ್ಯರಾದ ಡಾ.ರಂಜನಿ ರಾಮಚಂದ್ರನ್, ಡಾ.ರಾಜೇಶ್ ಎಲ್. ಕಡೆಮಣಿ, ಡಾ.ಜಾರ್ಜ್ ಬೆಲಾ ಸ್ಟೇಕ್, ಡಾ.ಎಸ್.ಆನಂದ, ಡಾ.ಶೀಬು ಬಾಲಕೃಷ್ಣ, ಡಾ.ಶಿವವಲ್ಲಿನಾಥನ್ ಅರುಣಾಚಲಂ, ವಿN°àಶ್ವರನ್, ಸೋಮಸುಂದರನ್, ಡಾ.ಹರ್ಷಿದ್ ಲಾಂಡೆ, ಡಾ.ಸಮಂತಾ ಗ್ರೇಸ್, ಡಾ.ಕೊಪ್ಪಳ್ ಶ್ರೀವತ್ಸವಾ, ಜಿಲ್ಲಾ ಕುಟುಂಬ ಕಲ್ಯಾಣಾ ಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯೆಲ್ಲಾ ರಮೇಶ್ ಬಾಬು, ಡಾ.ಅನಿಲ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿ ಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.