ಮೈಸೂರು: ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಡುವ ಜತೆಗೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಪೂರ್ಣ ಪ್ರಮಾಣದ ಯಶಸ್ಸು ಕಾಣಲು ಸಾಧ್ಯ ಎಂದು ಕೇಂದ್ರ ಸಚಿವ ರಮೇಶ್ ಸಿ.ಜಿಗಜಿಣಗಿ ಅಭಿಪ್ರಾಯಪಟ್ಟರು.
ನಗರದ ಎಚ್.ವಿ.ರಾಜೀವ್ ಸ್ನೇಹ ಬಳಗ ಕೈಗೊಂಡ ಸ್ವಚ್ಛತಾ ಆಂದೋಲನ 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ನಿತ್ಯೋತ್ಸವ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಶುಚಿತ್ವದಿಂದಾಗಿ ಹೆಚ್ಚಿನ ಕಾಯಿಲೆಗಳು ಹರಡುತ್ತಿದೆ. ಈ ನಿಟ್ಟಿನಲ್ಲಿ ಅಶುಚಿತ್ವ ಹೋಗಲಾಡಿಸಿ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಆ ಮೂಲಕ ದೇಶದ ಜನರು ಆರೋಗ್ಯಯುತವಾಗಿರಬೇಕಾದರೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕಿದೆ. ಇದಕ್ಕಾಗಿ ಕೇವಲ ಸರ್ಕಾರ ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಬೇಕೆಂದರು.
ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಶ್ರೇಣೀಕೃತ ವ್ಯವಸ್ಥೆಯಲ್ಲಿ ಪೌರ ಕಾರ್ಮಿಕರ ಹೊರತು ಬೇರೆ ಸಮುದಾಯದವರು ಸ್ವಚ್ಛತೆಗಾಗಿ ಪೊರಕೆ ಹಿಡಿದ ಉದಾಹರಣೆ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸುವ ಮೂಲಕ ಪ್ರತಿಯೊಂದು ಸಮುದಾಯದವರ ಪೊರಕೆ ಹಿಡಿದು ಸ್ವಚ್ಛತೆ ಮಾಡುವಂತೆ ಮಾಡಿದ್ದಾರೆ ಎಂದರು.
ರಾಮಕೃಷ್ಣ ಆಶ್ರಮದ ಮೋûಾತ್ಮಾನಂದಜಿ ಮಹಾರಾಜ್, ಸ್ವಚ್ಛತೆ ಸರ್ಕಾರದ ಕೆಲಸ ಎಂದು ಸುಮ್ಮನಾಗುವುದು ಸರಿಯಲ್ಲ, ಬದಲಿಗೆ ದೇಶವನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಕಾಣಿಕೆ ನೀಡಬೇಕಿದೆ ಎಂದರು.
ಇದೇ ವೇಳೆ ಸಂಭ್ರಮಾಚರಣೆ ಪ್ರಯುಕ್ತ ಸ್ವಚ್ಛತಾ ಹೀ ಸೇವಾ ರಾಷ್ಟ್ರೀಯ ಪುರಸ್ಕಾರ ಪಡೆದ ಡಿ.ಮಾದೇಗೌಡ, ಡಾ.ಕೆ.ಎಸ್.ನಾಗಪತಿ, ಕ್ಲೀನ್ ಮೈಸೂರು ಫೌಂಡೇಷನ್ ಅಧ್ಯಕ್ಷ ಡಾ.ಸಿ.ಜಿ.ಬೆಟಸೂರಮಠ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವಿಭಾಗೀಯ ಅಧಿಕಾರಿ ಶ್ರೀಹರಿ, ನಗರ ಪಾಲಿಕೆ ವೈದ್ಯಾಧಿಕಾರಿ ಡಾ.ನಾಗರಾಜ್,
-ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕ ಸಮುದಾಯ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಪೌರಕಾರ್ಮಿಕ ಸಮುದಾಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಎಚ್.ವಿ. ರಾಜೀವ್ ಸ್ನೇಹ ಬಳಗದ ಸಂಸ್ಥಾಪಕ ಎಚ್.ವಿ.ರಾಜೀವ್ ಮತ್ತಿತರರಿದ್ದರು.