ಮಿಸೋರಿ, ಅಮೆರಿಕ : ಟಾಲ್ಕಂ ಪೌಡರ್ ಬಳಸಿದ ಕಾರಣಕ್ಕೆ ತಮಗೆ ಕ್ಯಾನ್ಸರ್ ಬಂದಿದೆ ಎಂದು ವಾದಿಸಿ ಗೆದ್ದಿರುವ 22 ಮಹಿಳೆಯರಿಗೆ 4.69 ಶತಕೋಟಿ ಡಾಲರ್‌ಗಳನ್ನು, ಪರಿಹಾರವಾಗಿ ನೀಡುವಂತೆ ಮಿಸೋರಿಯ ಸೈಂಟ್ ಲೂಯಿಸ್ ನಲ್ಲಿನ ಅಮೆರಿಕದ ನ್ಯಾಯಾಲಯ ಜಾನ್‌ಸನ್ ಆ್ಯಂಡ್ ಜಾನ್‌ಸನ್ ಕಂಪೆನಿಗೆ ಆದೇಶಿಸುವ ಮೂಲಕ ಮಹಾ ಪ್ರಹಾರ ನೀಡಿದೆ.
ಜಾನ್‌ಸನ್ ಆ್ಯಂಡ್ ಜಾನ್‌ಸನ್ ಕಂಪೆನಿಯ ಟಾಲ್ಕಂ ಪೌಡರ್‌ನಲ್ಲಿರುವ ಆರೋಗ್ಯಕ್ಕೆ ಹಾನಿಕರವಾಗಿರುವ ಆ್ಯಸ್‌ಬೆಸ್ಟೋಸ್ ಅಂಶದಿಂದಾಗಿ ತಮಗೆ ಗರ್ಭಾಶಯದ ಕ್ಯಾನ್ಸರ್ ಬಂತೆಂದು 22 ಮಹಿಳೆಯರು ಕಂಪೆನಿಯ ವಿರುದ್ಧ ದಾವೆ ಹೂಡಿದ್ದರು.
ಔಷಧ ಉತ್ಪನ್ನಗಳ ವಿಶ್ವ ದಿಗ್ಗಜ ಸಂಸ್ಥೆಯಾಗಿರುವ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ ಕೋರ್ಟ್ ತೀರ್ಪಿನ ಪ್ರಕಾರ ದಾವೆ ಗೆದ್ದಿರುವ ಮಹಿಳೆಯರು ಮತ್ತು ಅವರ ಕುಟುಂಬದವರಿಗೆ 55 ಕೋಟಿ ಡಾಲರ್ ಪರಿಹಾರವನ್ನು ಮತ್ತು 4.14 ಬಿಲಿಯ ಡಾಲರ್‌ಗಳ ಪ್ಯೂನಿಟಿವ್ ಡ್ಯಾಮೇಜಸ್ (ಎಂದರೆ ಅತ್ಯಂತ ನಿರ್ಲಕ್ಷದಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಸಗಿರುವ ಅಪರಾದಕ್ಕೆ ನೀಡಲಾಗುವ ಮತ್ತು ಲೆಕ್ಕ ಹಾಕಿರುವುದಕ್ಕಿಂತಲೂ ಮೀರಿದ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ವಿಧಿಸಲಾಗುವ ಅಸಾಮಾನ್ಯ ಪ್ರಮಾಣದ ದಂಡ)ವನ್ನು ಸಂತ್ರಸ್ತರಿಗೆ ಪಾವತಿಸಬೇಕಿದೆ.
ಜಾನ್‌ಸನ್ ಬೇಬಿ ಪೌಡರ್ ಬಳಸುವಲ್ಲಿ ಇರಬಹುದಾದ ಕ್ಯಾನ್ಸರ್ ಅಪಾಯಗಳ ಬಗ್ಗೆಯಾಗಲೀ ಆ ಉತ್ಪನ್ನದಲ್ಲಿ ಇರುವ ಕ್ಯಾನ್ಸರ್ ಕಾರಕ ರಾಸಾಯನಿಕ ಅಂಶದ ಬಗ್ಗೆಯಾಗಲೀ ಕಂಪೆನಿಯು ಯಾವುದೇ ಮುನ್ನಚ್ಚರಿಕೆಯನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕ್ಯಾನ್ಸರ್ ಪೀಡಿತ ಅರ್ಜಿದಾರ ಮಹಿಳೆಯರು ವಾದಿಸಿದ್ದರು.
ಜಾನ್‌ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ತನಗೆ ಈ ಕೋರ್ಟ್ ತೀರ್ಪಿನಿಂದ ನಿರಾಶೆಯಾಗಿದೆ; ತಾನು ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿದ್ದೇನೆ ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಅಂದ ಹಾಗೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ತನ್ನ ಬೇಬಿ ಡಾಲ್ಕಂ ಪೌಡರ್ ಗೆ ಸಂಬಂಧಿಸಿದಂತೆ ಇತರ 9,000 ಕೇಸುಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದೆ ಎಂದು ನಿಯಂತ್ರಣ ದಾಖಲೆ ಪತ್ರಗಳು ತಿಳಿಸಿವೆ.