ಕೋಲ್ಕತ್ತಾ: ಅಂಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಇದೀಗ ತನ್ನ ಬತ್ತಳಿಕೆಗೆ ಹೊಸ ಅಸ್ತ್ರವೊಂದನ್ನು ಸೇರಿಸಿಕೊಂಡಿದೆ. ಬಾಂಗ್ಲಾ ಆಟಗಾರ ಲಿಟ್ಟನ್ ದಾಸ್ ಬದಲಿಗೆ ವಿಂಡೀಸ್ ಸ್ಫೋಟಕ ಆಟಗಾರನನ್ನು ಕೆಕೆಆರ್ ಕರೆತಂದಿದೆ.
ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ವಿಂಡೀಸ್ ತಂಡದ ಸದಸ್ಯನಾಗಿದ್ದ ಜಾನ್ಸನ್ ಚಾರ್ಲ್ಸ್ ಅವರು ಇದೀಗ ಕೆಕೆಆರ್ ಪಾಳಯ ಸೇರಿದ್ದಾರೆ. ಅವರು ತಮ್ಮ 219 ಟಿ20 ಇನ್ನಿಂಗ್ಸ್‌ಗಳಲ್ಲಿ 179 ರಲ್ಲಿ ಆರಂಭಿಕ ಆಟಗಾರನಾಗಿ ಆಡಿದ್ದಾರೆ. 25.47 ಸರಾಸರಿ ಮತ್ತು 125.72 ರಲ್ಲಿ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಲಿಟ್ಟನ್ ತನ್ನ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿಗೆ ಹಾಜರಾಗಲು ಈ ತಿಂಗಳ ಆರಂಭದಲ್ಲಿ ನೈಟ್ ರೈಡರ್ಸ್ ಶಿಬಿರವನ್ನು ತೊರೆದಿದ್ದರು. ಹರಾಜಿನಲ್ಲಿ 50 ಲಕ್ಷಕ್ಕೆ ಖರೀದಿಸಿದ ಅವರು ಐಪಿಎಲ್ 2023 ರಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದರು. ಇದೀಗ ಚಾರ್ಲ್ಸ್ ಅವರು ಕೂಡಾ 50 ಲಕ್ಷ ರೂ ಗೆ ಕೆಕೆಆರ್ ಪಾಲಾಗಿದ್ದಾರೆ.
ಕೆಕೆಆರ್ ತಂಡವು ಈ ಋತುವಿನಲ್ಲಿ ಆರಂಭಿಕ ಕಾಂಬಿನೇಶನ್ ನಲ್ಲಿ ಸ್ಥಿರತೆಗಾಗಿ ಹೆಣಗಾಡುತ್ತಿದೆ. ಅವರು ಒಂಬತ್ತು ಪಂದ್ಯಗಳಲ್ಲಿ ಆರು ಆರಂಭಿಕ ಸಂಯೋಜನೆಗಳನ್ನು ಪ್ರಯತ್ನ ಮಾಡಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ನೈಟ್ ರೈಡರ್ಸ್ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಪಂಜಾಬ್ ಕಿಂಗ್ಸ್ (ಮೇ 8), ರಾಜಸ್ಥಾನ ರಾಯಲ್ಸ್ (ಮೇ 11), ಚೆನ್ನೈ ಸೂಪರ್ ಕಿಂಗ್ಸ್ (ಮೇ 14) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಮೇ 20) ಜೊತೆ ಪಂದ್ಯಗಳನ್ನು ಆಡಲಿದೆ.