ಕೀ ಬಿಸ್ಕೇನ್: ಮಾಜಿ ನಂ. ವನ್ ಕ್ಯಾರೋಲೀನ್ ವೋಜ್ನಿಯಾಕಿ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ಬ್ರಿಟನ್‌ನ ಜೊಹಾನ್ನಾ ಕೊಂಟಾ ಅವರು ಮಿಯಾಮಿ ಓಪನ್ ಟೆನಿಸ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕಳೆದ 40 ವರ್ಷಗಳಲ್ಲಿ ಬ್ರಿಟನ್‌ನ ವನಿತೆಯೊಬ್ಬರು ಗೆದ್ದ ಬಲುದೊಡ್ಡ ಪ್ರಶಸ್ತಿ ಇದಾಗಿದೆ.
ಸಿಡ್ನಿಯಲ್ಲಿ ಹುಟ್ಟಿದ್ದ 25ರ ಹರೆಯದ ಕೊಂಟಾ ಫೈನಲ್‌ನಲ್ಲೂ ಅಮೋಘವಾಗಿ ಆಡಿ ವೋಜ್ನಿಯಾಕಿ ಅವರನ್ನು 6-4, 6-3 ಸೆಟ್‌ಗಳಿಂದ ಕೆಡಹಿದ್ದರು. ತನ್ನ ಬಾಳ್ವೆಯ ಚೊಚ್ಚಲ ಎಲೈಟ್ ಡಬ್ಲ್ಯುಟಿಎ ಟೂರ್ ಪ್ರಶಸ್ತಿ ಗೆದ್ದ ಕೊಂಟಾ ಮುಂದಿನ ವಿಶ್ವ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.
ಸೆಮಿಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿದ್ದ ಕೊಂಟಾ ಫೈನಲ್ ನಲ್ಲಿಯೂ ಉತ್ತಮ ಹೋರಾಟ ಸಂಘಟಿಸಿ ದ್ದರು. ಮುನ್ನಡೆ ಉಳಿಸಿಕೊಳ್ಳಲು ಯಶಸ್ವಿಯಾದ ಕೊಂಟಾ ಚಾಂಪಿಯನ್ ಪಟ್ಟ ಅಲಂಕರಿಸಿದರು. ಡಬ್ಲ್ಯುಟಿಎ ಟೂರ್ ಟೆನಿಸ್ ಕೂಟದಲ್ಲಿ ಇದು ಅವರ ಎರಡನೇ ಫೈನಲ್ ಆಗಿತ್ತು. ಈ ಬಾರಿ ಗೆದ್ದು ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಿದರು. 2016ರ ಬೀಜಿಂಗ್‌ನಲ್ಲಿ ನಡೆದ ಡಬ್ಲ್ಯುಟಿಎ ಟೂರ್ ಟೆನಿಸ್ ಕೂಟದ ಫೈನಲ್‌ನಲ್ಲಿ ಕೊಂಟಾ ಅವರು ಅಗ್ನಿಸ್ಕಾ ರಾದ್ವಂಸ್ಕಾ ಅವರಿಗೆ ಶರಣಾಗಿದ್ದರು.
ವೋಜ್ನಿಯಾಕಿ ಅವರಿಗಿದು ಈ ವರ್ಷದ ಮೂರನೇ ಫೈನಲ್ ಆಗಿತ್ತು. ಈ ಬಾರಿಯೂ ಅವರು ಗೆಲುವಿನಿಂದ ವಂಚಿತರಾಗಿದ್ದರು. ಈ ಮೊದಲು ದುಬೈ ಮತ್ತು ದೋಹಾದಲ್ಲಿ ನಡೆದ ಟೆನಿಸ್ ಕೂಟದಲ್ಲಿ ಅವರು ಫೈನಲಿನಲ್ಲಿ ಎಡವಿದ್ದರು.
ನನ್ನ ಮೂರನೇ ಫೈನಲ್‌ನಲ್ಲಿ ಅದೃಷ್ಟ ಒಲಿಯ ಬಹುದೆಂದು ಭಾವಿಸಿದ್ದೆ. ಆದರೆ ಸಾಧ್ಯವಾಗಲಿಲ್ಲ. ನಾಲ್ಕನೇ ಫೈನಲ್‌ವರೆಗೆ ಸಾಗ ಬೇಕಾಗಿದೆ ಎಂದು ಪಂದ್ಯದ ಬಳಿಕ ವೋಜ್ನಿ ಯಾಕಿ ತಿಳಿಸಿದರು. ಈ ಗೆಲುವಿನಿಂದ ನನಗೆ ಆತೀವ ಸಂತಸವಾಗಿದೆ ಎಂದು ಜೊಹಾನ್ನಾ ಕೊಂಟಾ ಹೇಳಿದ್ದಾರೆ.