Advertisement

ಜೋಗುರ ಬರಹಗಳು ಅನನ್ಯ: ಡಾ|ಸಿದ್ಧಲಿಂಗ

09:27 AM Sep 09, 2019 | Suhan S |

ಧಾರವಾಡ: ಪ್ರಗತಿಪರ ಚಿಂತಕರಾಗಿದ್ದ ಡಾ| ಎಸ್‌. ಬಿ. ಜೋಗುರ ಅವರ ನೇರ ನುಡಿ, ನುಡಿದಂತೆ ನಡೆದ ಜೀವನ ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಕಷ್ಟಕರವಾದದ್ದು. ಅದಕ್ಕಾಗಿ ಜೋಗುರ ಎತ್ತರದಲ್ಲಿ ನಿಲ್ಲುತ್ತಾರೆ ಎಂದು ಹಿರಿಯ ಸಾಹಿತಿ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

Advertisement

ಆಲೂರು ವೆಂಕಟರಾವ್‌ ಭವನದಲ್ಲಿ ಹಮ್ಮಿಕೊಂಡಿದ್ದ ಡಾ| ಎಸ್‌.ಬಿ. ಜೋಗುರ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೋಗುರ ಅವರ ಜೀವನದಲ್ಲಿ ಅನುಭವಿಸಿದ ನೋವು-ನಲಿವುಗಳನ್ನೇ ಅವರ ಕಥೆಗಳ, ಬರಹಗಳ ರೂಪದಲ್ಲಿ ಕಾಣಬಹುದು. ಜೀವನವನ್ನು ಲೇಖನಗಳಿಗೆ ಇಳಿಸಿದ ಅವರ ಬರಹಗಳು ಅನನ್ಯವಾದವುಗಳು. ಅವರ ಅಪೂರ್ಣಗೊಂಡ ಲೇಖನಗಳನ್ನು ಪೂರ್ಣಗೊಳಿಸುವುದು ಮತ್ತು ಅವರು ಎತ್ತಿ ಹಿಡಿದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.

ಜೋಗುರ ಅವರ ಮುಖಗಳನ್ನು ಕಂಡ ಅವರ ಗೆಳೆಯರು, ಹಿತೈಷಿಗಳು ಸೇರಿದಂತೆ ವಿದ್ಯಾರ್ಥಿಗಳು ಲೇಖನಗಳನ್ನು ಬರೆದು ಒಂದು ಪುಸ್ತಕ ಪ್ರಕಟಿಸಬೇಕು. ಜೋಗುರ ಅವರ ಪತ್ನಿ ಶೀತಲ ಅವರು 200 ಪುಟದ ಜೋಗುರ ಅವರ ಜೀವನ ಕುರಿತು ಸಮಗ್ರ ಪುಸ್ತಕ ಹೊರಗೆ ತರಬೇಕು ಎಂದು ಹೇಳಿದರು.

ಡಾ| ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಜೋಗುರ ಅವರಂತಹ ಸಾಹಿತಿಗಳು ಕೇವಲ ಪುಸ್ತಕದಲ್ಲಿ ಮಾತ್ರವಲ್ಲ ಬದುಕಿನಲ್ಲಿ ಜೀವಂತವಾಗಿರುತ್ತಾರೆ. ಜೋಗುರ ಅವರ ಶಕ್ತಿ, ವಿಶಿಷ್ಟತೆಯನ್ನು ಪ್ರಚುರಪಡಿಸುವ ಕೆಲಸವನ್ನು ಮುಂದೆಯೂ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಬರುವ ಅಕ್ಟೋಬರ್‌ನಲ್ಲಿ ವಿಶ್ವ ಶಿಕ್ಷಕರ ದಿನದ ಸಂದರ್ಭದಲ್ಲಿ ಅವರ ಕೃತಿಗಳು, ಬದುಕು, ಸಾಮಾಜಿಕ ಬದ್ಧತೆ, ಒಟ್ಟು ಅವರ ವ್ಯಕ್ತಿತ್ವದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಗೆಳೆಯರ ಬಳಗದಿಂದ ಆಯೋಜಿಸುವ ಚಿಂತನೆಯಿದೆ ಎಂದರು.

Advertisement

ಶಂಕರ ಹಲಗತ್ತಿ ಮಾತನಾಡಿ, ಧಾರವಾಡದ ಯಾವುದೇ ಪ್ರಗತಿಪರ ಹೋರಾಟಕ್ಕೆ ಬೆಂಬಲವಾಗಿ ಜೋಗುರ ನಿಲ್ಲುತ್ತಿದ್ದರು. ಅವರ ಸಾಹಿತ್ಯ, ಬದುಕು ನಿರಂತರವಾಗಿ ಚರ್ಚೆಯಾಗಬೇಕು. ಆ ಮೂಲಕ ಈ ಪೀಳಿಗೆಗೆ ಅವರ ವಿಚಾರಗಳನ್ನು ಕೊಂಡೊಯ್ಯೋಣ ಎಂದು ಹೇಳಿದರು.

ಜೋಗುರ ಅವರ ಪತ್ನಿ ಶೀತಲ ಮಾತನಾಡಿ, ಜೋಗುರ ಅವರ ವೈಚಾರಿಕ ಚಿಂತನೆಗಳು, ಆದರ್ಶಗಳು ಮತ್ತು ಅವರ ಆಶಯಗಳನ್ನು ಜೀವಂತವಾಗಿಡುವ ಜೊತೆಗೆ ಅಪೂರ್ಣಗೊಂಡಿರುವ ಅವರ ಸಾಮಾಜಿಕ ಬದ್ಧತೆಯ ಕಾರ್ಯಗಳನ್ನು ಪೂರ್ಣಗೊಳಿಸುವ ಹೊಣೆ ಈಗ ನನ್ನ ಮೇಲಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ರಾಮಾಂಜನಪ್ಪ ಆಲ್ದಳ್ಳಿ, ಡಾ| ವೆಂಕನಗೌಡ ಪಾಟೀಲ, ಎಸಿ ಮಹಮದ್‌ ಜುಬೇರ, ಡಾ| ಪ್ರಜ್ಞಾ ಮತ್ತಿಹಳ್ಳಿ, ವೆಂಕಟೇಶ ಮಾಚಕನೂರ, ರಾಘವೇಂದ್ರ ಪಾಟೀಲ, ಎಂ.ಬಿ. ಕೊಳವಿ, ಎಸ್‌.ಎಸ್‌. ಹಿರೇಮಠ, ಹೇಮಾ ಪಟ್ಟಣಶೆಟ್ಟಿ, ಬಿ.ಐ. ಇಳಿಗೇರ, ಡಾ| ಜಿ.ಕೆ. ಬಡಿಗೇರ, ಡಾ| ತಲ್ಲೂರ, ಎಚ್.ಜಿ. ದೇಸಾಯಿ ಮೊದಲಾದವರು ಜೋಗುರ ಅವರೊಂದಿಗಿನ ತಮ್ಮ ಒಡನಾಟ ಹಂಚಿಕೊಂಡರು. ಕಲಾವಿದ ಬಹುರೂಪಿ ಚಿತ್ರಿಸಿದ ಜೋಗುರ ಭಾವಚಿತ್ರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next