Advertisement

ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಷ್ಟಾಕ್ಷರ ಮಹಾಹೋಮ

03:12 PM Mar 14, 2019 | |

ಮುಂಬಯಿ: ಸತ್ಯ, ಧರ್ಮಗಳ ಪ್ರತಿರೂಪ ಎಂದೇ ಹೇಳುವುದಾದರೆ ಮಂತ್ರಾಲಯದ ಶ್ರೀ ಗುರುರಾಘವೇಂದ್ರರಿಗೆ ಮಾತ್ರ. ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಬಿಡುಗಡೆ ಮಾಡಿ ಸುಖಮಯ ಜೀವನವನ್ನು ಸಾಗಿಸಲು ಬೇಕಾಗುವ ಶಕ್ತಿ ಮತ್ತು ಚೈತನ್ಯಗಳನ್ನು ಅವರು ನಮಗೆ ಪ್ರಸಾದಿಸುತ್ತಾರೆ ಎಂಬ ನಂಬಿಕೆ ರಾಯರ ಭಕ್ತಾದಿಗಳಲ್ಲಿ ಅಪಾರವಾಗಿದೆ. ಶ್ರೀ ಗುರು ಸಾರ್ವಭೌಮರನ್ನು ಪೂಜಿಸಿದವರಿಗೆ ಸಿರಿ, ಸಂಪತ್ತಿನ ಕೊರತೆ ಇರದು. ಮಂತ್ರಾಲಯ ಎಂಬ ಪುಣ್ಯಕ್ಷೇತ್ರದ ಬೃಂದಾನವನದಲ್ಲಿ ನೆಲೆಸಿರುವ ಯತಿವರ್ಯರನ್ನು ಧ್ಯಾನಿಸಿ, ಸ್ಮರಿಸಿ ಮುಕ್ತಿ ಹೊಂದಬಹುದು. ಗುರುರಾಯರ ಸಿದ್ಧಿಯನ್ನು ಪಡೆದ ಕ್ಷೇತ್ರವೇ ಮಂತ್ರಾಲಯವಾಗಿದೆ. ರಾಯರನ್ನು ಭಕ್ತಿ, ಶ್ರದ್ಧೆಯಿಂದ  ನಂಬಿ ಸೇವೆಗೈದರೆ ಎಂದಿಗೂ ಕೈಬಿಡಲಾರರು ಎಂದು ಜೋಗೇಶ್ವರಿ ರಾಘವೇಂದ್ರ ಸ್ವಾಮಿ ಮಠದ ಪ್ರಹ್ಲಾದಾಚಾರ್ಯರು ನುಡಿದರು.

Advertisement

ಮಾ. 13ರಂದು ಜೋಗೇಶ್ವರಿ ಪಶ್ಚಿಮದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಭಕ್ತಿ ಪರಿಶುದ್ಧವಾಗಿರಬೇಕು. ಭಕ್ತಿಯಲ್ಲಿ ಏಕಭಾವ, ಧೃಡತೆ ಇರಬೇಕು. ಆಗ ನಮ್ಮ ಸಮಸ್ಯೆಗಳಿಗೆ ಗುರುರಾಯರು ಯಾವುದೇ ಒಂದು ರೀತಿಯಲ್ಲಿ ಪರಿಹಾರವನ್ನು ನೀಡುತ್ತಾರೆ. ಎಷ್ಟೇ ಸಂವತ್ಸರ ಕಳೆದರೂ ಭಕ್ತರ ಭಕ್ತಿಯ ತೀವ್ರತೆ, ಸಡಗರ, ಶ್ರದ್ಧೆ, ಭಕ್ತಿ ಕಡಿಮೆಯಾಗುವುದಿಲ್ಲ. ಈ ಪರಮ ಪುಣ್ಯ ದಿನವಾದ ರಾಯರ ಹುಟ್ಟುಹಬ್ಬದ ಶುಭ ದಿನದಲ್ಲಿ ಭಕ್ತಿಯಿಂದ ರಾಯರ ಸ್ಮರಣೆ ಮಾಡಿ ಧನ್ಯರಾಗೋಣ ಎಂದರು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 7 ರಿಂದ ಗುರುರಾಯರಿಗೆ ವಿಶೇಷ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾರ್ಚನೆ, ಅನಂತರ ಶ್ರೀಮತಿ ಸಾಬಕ್ಕ ಅವರ ನೇತೃತ್ವದಲ್ಲಿ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಪೂರ್ವಾಹ್ನ 9.30ರಿಂದ ರಾಯರ ಹುಟ್ಟು ಹಬ್ಬದ ಪ್ರಯುಕ್ತ ರಾಘವೇಂದ್ರ ಅಷ್ಟಾಕ್ಷರ ಮಹಾಹೋಮವು ಮಠದ ಪ್ರಧಾನ ಅರ್ಚಕರಾದ ಗುರುರಾಜಾಚಾರ್ಯ, ಪ್ರಹ್ಲಾದಾಚಾರ್ಯಾ, ರಾಘವೇಂದ್ರಾಚಾರ್ಯ ಮತ್ತು  ವ್ಯಾಸರಾಜಾಚಾರ್ಯರ ಪೌರೋ ಹಿತ್ಯದಲ್ಲಿ ಜರಗಿತು.

ಪೂರ್ವಾಹ್ನ 11ರಿಂದ ಭಜನಕಾರ, ಹಾರ್ಮೋನಿಯಂ ವಾದಕ ಕಿಶೋರ್‌ ಕರ್ಕೇರ  ಹೆಜಮಾಡಿ ಇವರ ನೇತೃತ್ವದಲ್ಲಿ ರಾಯರ ಬಳಗ ಮೀರಾರೋಡ್‌ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ರಾಯರ ಬಳಗ ಮೀರಾರೋಡ್‌ ಇವರಿಂದ ವಿಶೇಷ ಅಲಂಕಾರ ಸೇವೆಯನ್ನು ಆಯೋಜಿಸಲಾಗಿತ್ತು.

ಭಜನಾ ಸೇವೆಯಲ್ಲಿ ಹಾರ್ಮೋನಿಯಂನಲ್ಲಿ ಕಿಶೋರ್‌ ಕರ್ಕೇರ, ತಬಲಾದಲ್ಲಿ ಗಗನ್‌ ಮೆಂಡನ್‌, ಮಾಧವ ಮೊಗವೀರ, ಗಿರೀಶ್‌ ಕರ್ಕೇರ, ಸುರೇಶ್‌ ಸಾಲ್ಯಾನ್‌, ಪುರುಷೋತ್ತಮ ಮಂಚಿ, ಕೃಷ್ಣ ಬಂಗೇರ, ವಿನೋದ್‌ ಸಾಲ್ಯಾನ್‌, ದೇವದಾಸ್‌ ಕರ್ಕೇರ, ಚೇತನ್‌ ಸಾಲ್ಯಾನ್‌ ಇವರು ಸಹಕರಿಸಿದರು. ರಾಯರ ಬಳಗದ ಸದಸ್ಯರ ವತಿಯಿಂದ ಗುರುರಾಯರಿಗೆ ವಿಶೇಷ ಅಲಂಕಾರ ಸೇವೆ ನಡೆಯಿತು. ಅನಂತರ ರಥೋತ್ಸವ, ಮಂಗಳಾರತಿ, ಅನ್ನದಾನ ನೆರವೇರಿತು. ಸಾವಿರಾರು ಭಕ್ತಾದಿಗಳು ಫಲಮಂತ್ರಾಕ್ಷತೆ ಸ್ವೀಕರಿಸಿ ಗುರುರಾಯರ ಬೃಂದಾವನದ ದರ್ಶನ ಪಡೆದರು. ವಿಶೇಷ ಭಜನಾ ಕಾರ್ಯಕ್ರಮ ನೀಡಿದ ರಾಯರ ಬಳಗದ ಸದಸ್ಯರನ್ನು ಮಠದ ಪ್ರಬಂಧಕ ಪ್ರಹ್ಲಾದಾಚಾರ್ಯ ಅಭಿನಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next