ಶಿರಸಿ: ಹಲವು ಕಷ್ಟಗಳನ್ನು ಪರಿಹರಿಸುವ ಮಹಾತಾಯಿ ಎಂದೇ ಹೆಸರಾದ ಮಾರಿಕಾಂಬೆ ಜಾತ್ರೆಯಲ್ಲಿ ಹರಕೆ ತೀರಿಸುವುದು ವಾಡಿಕೆ. ಹಣ್ಣುಕಾಯಿ, ಕುಂಕುಮಾರ್ಚನೆ, ಉಡಿ, ಬೇವಿನ ಉಡಿ, ಸೀರೆ, ಹಾರುಕೋಳಿ, ಕುರಿ ಹರಕೆಗಳೂ ಇವೆ. ಇವುಗಳನ್ನು ತೀರಿಸುವ ಭಕ್ತರು ಜಾತ್ರೆಯಲ್ಲಿ ಪ್ರತಿದಿನವೂ ಕಾಣುತ್ತಾರೆ.
ಅಮ್ಮನ ಗದ್ದುಗೆಯ ಸುತ್ತ ದೀಡ್ ನಮಸ್ಕಾರ ಹಾಕಿಕೊಡುವುದಾಗಿ ಹೇಳಿಕೊಳ್ಳುವವರೂ ಸಿಗುತ್ತಾರೆ. ಮಕ್ಕಳಾಗದವರು, ಕಲ್ಯಾಣ ಆಗದರು, ನೌಕರಿ ಸಿಗದವರು, ಎಷ್ಟೇ ಮಾಡಿದರೂ ಪರೀಕ್ಷೆಯಲ್ಲಿ ತೇರ್ಗಡೆ ಆಗದವರು, ಆರೋಗ್ಯ ಸಮಸ್ಯೆ ಪರಿಹರಿಸುವಂತೆ ಭಕ್ತರು ಬೇಡಿಕೊಳ್ಳುತ್ತಾರೆ.
ಜೋಗತಿಯರ ಪಾತ್ರ ಜೋಗತಿಯರು ಜಾತ್ರೆಯ ವಿಶೇಷ ವ್ಯಕ್ತಿಗಳು. ಮಾರಮ್ಮ, ಸವದತ್ತಿ ಯಲ್ಲಮ್ಮನ ಚಿತ್ರ ಹಿಡಿದು ಭಕ್ತರಿಗೆ ತಿಲಕ ಇಟ್ಟು ಭಿಕ್ಷೆ ಬೇಡುವ ಮಾರಿಕಾಂಬೆಯ ಭಕ್ತರು ಇವರು. ಕುತ್ತಿಗೆಯಲ್ಲಿ ಚಿಪ್ಪಿನ ಸರ ಹಾಕಿಕೊಂಡು ಮುಖದ ತುಂಬು ಕುಂಕುಮ ಹಾಕಿಕೊಂಡು ದೇವಿ ಆರಾಧಕರು ಹರಿಸಿದರೆ ಭಕ್ತರಿಗೆ ಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇದೆ.
ದೀಡ್ ನಮಸ್ಕಾರ ಹಾಕಿದ ಬೇವಿನ ಉಡಿ ಸೇವೆ ಸಲ್ಲಿಸಿದ ಭಕ್ತರು ಜೋಗತಿಯರ ಕೈಗೆ ಕಂಕಣ ಕಟ್ಟುತ್ತಾರೆ. ಪೂಜೆ ಮಾಡಿದ ಎಲೆ, ದಾರ ಹೂವು ಒಳಗೊಂಡ ಕಂಕಣ ಕಟ್ಟಿ ಜೋಗತಿಯರು ಇಟ್ಟುಕೊಂಡ ಬುಟ್ಟಿ, ದೇವಿ ಚಿತ್ರಕ್ಕೆ ಹೂವು, ಅಕ್ಕಿ ಹಾಕುತ್ತಾರೆ. ಕಾಣಿಕೆಯನ್ನೂ ಸಲ್ಲಿಸುತ್ತಾರೆ. ಅವರ ಕಷ್ಟ ಪರಿಹರಿದರೆ ಸಾಕು, ನಮಗೂ ಅದೇ ಖುಷಿ ಎನ್ನುತ್ತಾರೆ ಜೋಗತಿ ಹಾವೇರಿಯ ಕಮಲಮ್ಮ ನಂದಿಹಳ್ಳಿ.
ಭಕ್ತರು ಕೊಟ್ಟ ಉಡುಗೊರೆ ದೇವಿ ಭಕ್ತರು ಕೊಟ್ಟ ಉಡುಗೊರೆ ಸ್ವೀಕರಿಸಿ ಜೀವನ ನಡೆಸುವ ಇವರು ಮಧ್ಯಾಹ್ನ ದೇವಸ್ಥಾನದಲ್ಲಿ ಹಾಕುವ ಪ್ರಸಾದ ಭೋಜನ ಸ್ವೀಕರಿಸುತ್ತಾರೆ. ಇಡೀ ದಿನ ಜಾತ್ರೆ ಬಯಲಿನ ಮಾರಿಕಾಂಬೆ ಚಪ್ಪರದ ಬಳಿ ಮೂವತ್ತಕ್ಕೂ ಅಧಿಕ ಜೋಗತಿಯರು ಭಕ್ತರ ಹರಕೆ ತೀರಿಸುವ ವಾಹಕರಾಗಿದ್ದಾರೆ. ಒಮ್ಮೆ ಭಕ್ತರು ಕವಡೆ ಹಾರ, ಅಮ್ಮನ ಸರ ಕೊಟ್ಟರೆ ತೆಗೆಯುವದೇ ಇಲ್ಲ.
ಮನೆಯಲ್ಲಿ ಯಾರಾದರೂ ಸತ್ತರೆ, ಅಶೌಚ ಇದ್ದರೆ ಅಲ್ಲಿ ಊಟ ಕೂಡ ಮಾಡುವುದಿಲ್ಲ. ಕುಟುಂಬದಲ್ಲಿ ಮೃತರಾಗಿದ್ದರೆ ಮಣಿ ಕಳಚಿ ಹೊಸ ಮಣಿ ಹಾಕಿ ಪೂಜೆ ಮಾಡುತ್ತಾರೆ. ನಾನು ಹತ್ತು ವರ್ಷದಿಂದ ಜೋಗತಿಯಾಗಿದ್ದು, ಮದುವೆಯೂ ಆಗದೇ ದೇವಿ ಸೇವೆ ಮಾಡುತ್ತೇನೆ ಎನ್ನುತ್ತಾರೆ ಗಂಗವ್ವ ಬೇವಿನಹಳ್ಳಿ.