ಸಾಗರ: ತಾಲೂಕಿನಲ್ಲಿ ಕೋವಿಡ್ ಮಾರ್ಗಸೂಚಿಗಳ ಸಡಿಲಿಕೆಯ ಹಿನ್ನೆಲೆಯಲ್ಲಿ ಪ್ರವಾಸಿಗರು, ಭಕ್ತರಿಂದ ಗಿಜಿಗುಡುತ್ತಿದ್ದ ಇಲ್ಲಿನ ಜೋಗ, ಸಿಗಂದೂರು, ವರದಪುರಗಳಲ್ಲಿ ಏಕಾಏಕಿ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಮುಂದಾಗಿರುವುದರಿಂದ ಭೇಟಿ ನೀಡುವವರ ಸಂಖ್ಯೆಯಲ್ಲಿ ತೀವ್ರ
ಇಳಿಕೆಯಾಗಿದೆ.
ಕೋವಿಡ್ 3ನೇ ಅಲೆ ಕಾರಣ ಆ. 5ರಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಭೇಟಿಗೆ ಕೋವಿಡ್ ಮಾರ್ಗಸೂಚಿ ವಿಧಿಸಿದ್ದು, ಜೋಗ ಜಲಪಾತದಲ್ಲಿ ಗುರುವಾರದಿಂದಲೇ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡು ಬಂದಿತು. ಶಕ್ತಿಕ್ಷೇತ್ರ ಸಿಗಂದೂರಿನಲ್ಲಿ ವಾರದ ದಿನಗಳಲ್ಲಿ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ನೀಡಿ, ಸೇವೆಗಳನ್ನು ನಿರ್ಬಂಧಿಸಿರುವುದು ಭಕ್ತರ ಆಗಮನವನ್ನು ನಿರುತ್ತೇಜಗೊಳಿಸಿದೆ. ಈಗಾಗಲೇ ಸಿಗಂದೂರು ಹಾಗೂ ವರದಪುರದ ಶ್ರೀಧರಾಶ್ರಮದಲ್ಲಿ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಭಕ್ತರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1610 ಪ್ರಕರಣಗಳು ಪತ್ತೆ: 32 ಜನರು ಸೋಂಕಿಗೆ ಬಲಿ
ಪ್ರವಾಸೋದ್ಯಮ ಇಲಾಖೆಯ ಮೂಲಗಳ ಪ್ರಕಾರ, ಪ್ರತಿದಿನ ಸರಾಸರಿ 4 ಸಾವಿರದಿಂದ 5 ಸಾವಿರ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿದ್ದರು. ಗುರುವಾರ ಕೇವಲ 2 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆ ಶೇ. 60ರಷ್ಟು ಕ್ಷೀಣಿಸಿದೆ. ರಾಷ್ಟ್ರೀಯ ಹೆದ್ದಾರಿ 206ರ ಸೀತಾಕಟ್ಟೆ ಸೇತುವೆಯ ಬಳಿ ಪ್ರವಾಸಿ ಮಿತ್ರ, ಪೊಲೀಸ್, ಹೋಂ ಗಾರ್ಡ್ಸ್ ಸಿಬ್ಬಂದಿ ಪ್ರಾಧಿಕಾರದ ತಪಾಸಣಾ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ದೃಢೀಕರಣ ಪತ್ರವನ್ನು ತೋರಿಸಿದಲ್ಲಿ ಪ್ರವಾಸಿಗರಿಗೆ ಜೋಗ ಜಲಪಾತದ ಪ್ರಧಾನ ಪ್ರವೇಶ ದ್ವಾರಕ್ಕೆ ಪ್ರವೇಶ ಮಾಡಲು ಟೋಕನ್ ನೀಡಲಾಗುತ್ತದೆ.
ಕಾರ್ಗಲ್, ವಡನ್ ಬೈಲು, ಲಿಂಗನಮಕ್ಕಿ, ತಳಕಳಲೆ ಪ್ರದೇಶದ ವೀಕ್ಷಣೆಗೆ ಹೋಗುವವರಿಗೆ ಈ ತಪಾಸಣಾ ಗೇಟ್‌ನಲ್ಲಿ ಯಾವುದೇ ತಡೆ ಇರುವುದಿಲ್ಲ. ಜೋಗ ಜಲಪಾತ ವೀಕ್ಷಣೆಯ ಮತ್ತೂಂದು ಪ್ರಮುಖ ವೀಕ್ಷಣಾ ತಾಣವಾದ ಮುಂಬಯಿ ಬಂಗಲೆ ಪ್ರವಾಸಿಗರಿಗೆ ಮುಕ್ತವಾಗಿದೆ. ಇಲ್ಲಿಂದ ಜಲಪಾತ ವೀಕ್ಷಣೆಗೆ ಯಾವುದೇ ರೀತಿಯ ಕೋವಿಡ್ ನಿರ್ಬಂಧಗಳು ಇಲ್ಲ. ಮುಂಬಯಿ ಬಂಗಲೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವುದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಬಾಂಬೆ ಟಿಬಿ ಪ್ರದೇಶದಲ್ಲಿ ಜಾರಿಯಲ್ಲಿಲ್ಲ.