ಸಾಗರ: ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿ ಆಮೆಗತಿಯಲ್ಲಿ ಸಾಗುತ್ತಿದೆ. ಜೋಗ ಜಲಪಾತ ಸುತ್ತಲೂ ಕಾಂಕ್ರೀಟ್ ಕಾಡು ನಿರ್ಮಾಣಗೊಳ್ಳುತ್ತಿದ್ದು ಕಳೆದ ಮೂರು ವರ್ಷದಿಂದ ಕಾಮಗಾರಿ ಇನ್ನೂ ಮುಗಿದಿಲ್ಲ. ಸದ್ಯ ರಾಜ್ಯ ಹೊರರಾಜ್ಯ, ಹೊರರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಜೋಗದಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ಆದರೆ ಜೋಗ ನಿರ್ವಹಣಾ ಪ್ರಾಧಿಕಾರ ಮಾತ್ರ ಪ್ರವಾಸಿಗರು ಮತ್ತು ಪ್ರವಾಸಿ ವಾಹನಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ದುಪ್ಪಟ್ಟಗೊಳಿಸಿ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಶ್ವವಿಖ್ಯಾತ ಜೋಗ ಜಲಪಾತ ಮೈತುಂಬಿಕೊಳ್ಳುವುದು ಮಳೆಗಾಲದಲ್ಲಿ ಮಾತ್ರ. ವರ್ಷದಲ್ಲಿ ಆರು ತಿಂಗಳು ಕಂಗೊಳಿಸುವ ಜೋಗ ಜಲಪಾತ ನಂತರದ ತಿಂಗಳುಗಳಲ್ಲಿ ಬಿಳಿ ಹತ್ತಿ ಹಾರದಂತೆ ಕಂಡೂಕಾಣದಂತೆ ಧುಮುಕುತ್ತದೆ. ಪ್ರವಾಸಿಗರು ಸಹ ಈ ದಿನಗಳಲ್ಲಿ ಜೋಗದತ್ತ ಸುಳಿಯುವುದು ವಿರಳ. ಇದೀಗ ರಾಜ್ಯದ ಯಾವ ಪ್ರವಾಸಿ ತಾಣಗಳಲ್ಲಿ ಇಲ್ಲದ ಪ್ರವೇಶ ಶುಲ್ಕ ಮತ್ತು ವಾಹನ ಶುಲ್ಕ ವಿಧಿಸುವ ಮೂಲಕ ದಾಖಲೆ ನಿರ್ಮಿಸಿದೆ. ಅಭಿವೃದ್ಧಿ ಆದ ಮೇಲೆ ಪ್ರವೇಶ ಶುಲ್ಕ ಹೆಚ್ಚು ಮಾಡಿದ್ದರೆ ಯಾವುದೇ ವಿರೋಧ ಸ್ಥಳೀಯರು ಮತ್ತು ಪ್ರವಾಸಿಗರಿಂದ ಬರುತ್ತಿರಲಿಲ್ಲ. ಆದರೆ ಅಭಿವೃದ್ಧಿಯನ್ನೇ ಮಾಡದೆ ಜೋಗ ವೀಕ್ಷಣೆ ದರ ದುಪ್ಪಟ್ಟುಗೊಳಿಸಿರುವುದು ಸರಿಯಲ್ಲ ಎನ್ನುವುದು ಜನಾಭಿಪ್ರಾಯವಾಗಿದೆ.
ಜೋಗ ನಿರ್ವಹಣಾ ಪ್ರಾಧಿಕಾರಿ ಹೊಸ ದರ ನಿಗದಿಪಡಿಸಿ ಫ್ಲೆಕ್ಸ್ ಅಳವಡಿಕೆಗೆ ಎಲ್ಲ ಸಿದ್ಧತೆ ನಡೆಸಿದೆ. ಪ್ರವಾಸಿ ಬಸ್‌ಗೆ ರೂ. 200 (ಹಳೆ ದರ ರೂ. 150), ಮಿನಿ ಬಸ್‌ಗೆ ರೂ. 150 (ಹಳೆ ದರ ರೂ. 100), ಕಾರು ಮತ್ತು ಜೀಪ್‌ಗೆ ರೂ.80 (ಹಳೆ ದರ ರೂ.50 ), ಆಟೋಗೆ ರೂ. 40), (ಹಳೆದರ ರೂ. 30) ದ್ವಿಚಕ್ರ ವಾಹನ ರೂ. 30 (ಹಳೆ ದರ ರೂ.20), ವಿದೇಶಿ ಪ್ರವಾಸಿಗರಿಗೆ ರೂ. 100 (ಹಳೆ ದರ ರೂ. 50), ಪ್ರವಾಸಿಗರಿಗೆ ರೂ. 20 (ಹಳೆ ದರ ರೂ. 10), ಕಾಲೇಜು ವಿದ್ಯಾರ್ಥಿಗಳಿಗೆ ರೂ. 20, ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ. 10 ನಿಗದಿಪಡಿಸಿ ಫ್ಲೆಕ್ಸ್ ಅಳವಡಿಕೆಗೆ ಸಿದ್ಧತೆ ನಡೆಸಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ವಾಹನದಲ್ಲಿ ಕುಳಿತ ಪ್ರವಾಸಿಗರಿಗೂ ಶುಲ್ಕ ನಿಗದಿಪಡಿಸಲಾಗಿದೆ. ಇತರೆ ಪ್ರವಾಸಿ ತಾಣಗಳಲ್ಲಿ ವಾಹನಗಳಿಗೆ ಶುಲ್ಕ ನಿಗದಿ ಮಾಡುತ್ತಾರೆಯೇ ವಿನಾ ವಾಹನದೊಳಗಿನ ಪ್ರಯಾಣಿಕರಿಗೆ ಶುಲ್ಕ ತೆಗೆದುಕೊಳ್ಳುವುದಿಲ್ಲ. ಆದರೆ ಜೋಗ ನಿರ್ವಹಣಾ ಪ್ರಾಧಿಕಾರ ಹೊಸ ಸಂಪ್ರದಾಯ ಪ್ರಾರಂಭಿಸಿದೆ. ಒಮ್ಮೆ ಟಿಕೆಟ್ ಪಡೆದು ಒಳಗೆ ಹೋದವರು ಎರಡು ಗಂಟೆ ಮಾತ್ರ ಜೋಗ್ ಫಾಲ್ಸ್‌ನಲ್ಲಿ ಇರಬೇಕು. ನಂತರವೂ ಜಲಪಾತ ವೀಕ್ಷಣೆ ಮಾಡಬೇಕು ಎಂದರೆ ಮತ್ತೆ ಟಿಕೆಟ್ ಪಡೆಯಬೇಕಾ ಎನ್ನುವುದು ಪ್ರವಾಸಿಗರ ಪ್ರಶ್ನೆಯಾಗಿದೆ. ಕೆಲವೊಮ್ಮೆ ಮಂಜು ಮುಸುಕಿದರೆ ಜೋಗ ಜಲಪಾತ ಸಂಜೆವರೆಗೂ ಪ್ರವಾಸಿಗರಿಗೆ ದರ್ಶನ ನೀಡುವುದಿಲ್ಲ.
ಸದ್ಯ ಜೋಗ ಜಲಪಾತದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಭಾನುವಾರ ಮತ್ತು ರಜೆ ದಿನಗಳಲ್ಲಿ ಪ್ರವಾಸಿಗರು ಕಿಲೋಮೀಟರ್‌ಗಟ್ಟಲೆ ದೂರ ವಾಹನ ನಿಲ್ಲಿಸಿ ಪಾದಾಚಾರಿಗಳಾಗಿ ಫಾಲ್ಸ್‌ಗೆ ಬರಬೇಕು. ಹೀಗೆ ಬರುವ ಪ್ರವಾಸಿಗರಿಗೆ ವಾಹನಕ್ಕೂ ಟ್ಯಾಕ್ಸ್, ತಲೆಗೂ ಟ್ಯಾಕ್ಸ್ ಬೀಳುತ್ತಿದೆ. ಒಂದರ್ಥದಲ್ಲಿ ಅವೈಜ್ಞಾನಿಕ ಶುಲ್ಕ ವಸೂಲಿ ಕ್ರಮ ಜೋಗ ಜಲಪಾತದಲ್ಲಿ ನಡೆಯುತ್ತಿದ್ದು, ಜೋಗ ನಿರ್ವಹಣಾ ಪ್ರಾಧಿಕಾರ ಮಾಡುತ್ತಿರುವ ಹಗಲು ದರೋಡೆ ಎಂದೇ ಹೇಳಲಾಗುತ್ತಿದೆ.
ಫಾಲ್ಸ್ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಸರುಗದ್ದೆಯಾಗಿದೆ. ಇರುವ ಒಂದು ಶೌಚಾಲಯ ಗಬ್ಬು ನಾರುತ್ತಿರುತ್ತದೆ. ಕುಡಿಯುವ ನೀರು ಸಹ ಇಲ್ಲ. ಪ್ರವಾಸಿಗರಿಗೆ ಯಾವ ಸೌಲಭ್ಯವೂ ಕೊಡದೆ ಶುಲ್ಕ ಮಾತ್ರ ದುಬಾರಿ ವಸೂಲಿ ಯಾಕೆ ಎನ್ನುವುದಕ್ಕೆ ಪ್ರಾಧಿಕಾರದ ಅಧಿಕಾರಿಗಳೇ ಉತ್ತರ ಕೊಡಬೇಕು. ಅಭಿವೃದ್ಧಿಗೆ ಅನುದಾನ ತಂದಿರುವ ಶಾಸಕರು ದುಪ್ಪಟ್ಟು ಶುಲ್ಕ ವಿಧಿಸಿರುವುದನ್ನು ಕಡಿಮೆಗೊಳಿಸಿ ಜೋಗ ಜಲಪಾತವನ್ನು ಜನಸ್ನೇಹಿ ಪ್ರವಾಸಿ ತಾಣವಾಗಿಸುವತ್ತ ಗಮನ ಹರಿಸಬೇಕು ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.
ಯಾರ ಕಾಲದಲ್ಲಿ ಅನುದಾನ; ಗೊಂದಲ
ಜೋಗ ಜಲಪಾತವನ್ನು ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಕೊನೆ ಸಂದರ್ಭದಲ್ಲಿ ಸುಮಾರು 185 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದು ಯಾರು ಎನ್ನುವ ಜಿಜ್ಞಾಸೆ ಇದ್ದು, ಹಾಲಿ ಶಾಸಕರು ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದೆ. ಸಂಸದ ಬಿ.ವೈ.ರಾಘವೇಂದ್ರ, ಹಿಂದಿನ ಶಾಸಕ ಹರತಾಳು ಹಾಲಪ್ಪ ಕೊಡುಗೆ ಏನೂ ಇಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ.