ಸಾಗರ: ವಿಸ್ಮಯ ಎಂದು ಬಣ್ಣಿಸಲಾಗುವ ತಾಲೂಕಿನ ಜಗದ್ವಿಖ್ಯಾತ ಜೋಗ ಜಲಪಾತದ ಆಕರ್ಷಣೆ ಅಲ್ಲಿನ ಮೂಲ ಸೌಕರ್ಯಗಳ ಕೊರತೆ, ಸರ್ಕಾರಿ ಇಲಾಖೆಗಳ ಅಧಿಕೃತ ಹಣ ವಸೂಲಿಯ ಹೊರತಾಗಿಯೂ ಉಳಿದುಕೊಂಡಿರುವುದು ಮತ್ತೂಂದು ವಿಸ್ಮಯ ಎಂಬ ಮಾತು ಪದೇ ಪದೇ ಜೋಗದಲ್ಲಿ ಕೇಳುವ ವಾತಾವರಣ ಸೃಷ್ಟಿಯಾಗಿದೆ.
ವಾರದ ಹಿಂದೆ ಪ್ರವಾಸಿಗರ ಅಬ್ಬರ ಕಂಡು ಜಿಲ್ಲಾಡಳಿತ ಗಾಬರಿ ಬಿದ್ದ ಸನ್ನಿವೇಶ ನಿರ್ಮಾಣವಾಗಿತ್ತು. ಕೋವಿಡ್- 19 ಇದೇ ಕಾರಣದಿಂದ ಹೆಚ್ಚಾಗಬಹುದು ಎಂಬ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಜನದಟ್ಟಣೆಯನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಗೆ ತರಲು ಸೂಚಿಸಿದರು. ಆನಂತರವೂ ಪ್ರವಾಸಿಗರ ಸಂಖ್ಯೆ ಕುಸಿದಿಲ್ಲದಿರುವುದು ಮತ್ತೆ ಶನಿವಾರ, ಭಾನುವಾರ ವ್ಯಕ್ತವಾಗಿದೆ.
ನಾಮಫಲಕದಿಂದ ಅವಮಾನ ಆರಂಭ!: ಜೋಗ ನಿರ್ವಹಣಾ ಪ್ರಾಧಿ ಕಾರದ ಬಗ್ಗೆ ಜೋಗದ ಸ್ವಾಗತ ಫಲಕವೇ ಮೊದಲ ಸರ್ಟಿಫಿಕೇಟ್ ನೀಡುತ್ತದೆ. ಜೋಗ ಜಲಪಾತಕ್ಕೆ ಸುಸ್ವಾಗತ ಎಂಬ ಫಲಕದ ಅಕ್ಷರಗಳೇ ಉದುರಿ ಹೋಗಿ ಕನ್ನಡದ ಅಪಭ್ರಂಶ ಎದ್ದು ಕಾಣುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಗಾಳಿಯ ಹೊಡೆತಕ್ಕೆ ಅವುಗಳು ತಾಳಿಕೆ ಬರುವುದಿಲ್ಲ ಎಂಬ ಉತ್ತರ ಸಿಕ್ಕಿದೆ. ಜೋಗದಲ್ಲಿನ ಗಾಳಿ ಪರಿಸ್ಥಿತಿಯನ್ನು ಅರಿತಿರುವ ಪ್ರಾಧಿಕಾರ ಇದಕ್ಕೆ ಹಣ ವ್ಯಯಿಸುವ ಮುನ್ನ ಈ ಬಗ್ಗೆ ಗಮನ ಹರಿಸಬೇಕಿತ್ತಲ್ಲವೇ ಎಂಬ ಸ್ಥಳೀಯರ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ.
ಸಾಗರದಲ್ಲಿ ಕೆಲ ವರ್ಷಗಳ ಹಿಂದೆ ಸಹಾಯಕ ಆಯುಕ್ತರಾಗಿದ್ದ ನಿತೀಶ್ ಪಾಟೀಲ್‌ರಿಗೆ ಜೋಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಉದ್ದೇಶ ಇತ್ತು. ಅವರ ಆಸಕ್ತಿಯ ಕಾರಣದಿಂದ ಜೋಗದಲ್ಲಿ ಲೇಸರ್ ಶೋ, ಸಂಗೀತ ಕಾರಂಜಿಗಳು ಆರಂಭವಾದವು. ಈ ರೀತಿಯ ಮನರಂಜನೆ ಒದಗಿಸುತ್ತಿದ್ದೇವೆ ಎಂದು ಪ್ರತಿಪಾದಿಸಿದ ನಿರ್ವಹಣಾ ಪ್ರಾಧಿಕಾರ, 2012ರಲ್ಲಿ ಪ್ರವೇಶ ಶುಲ್ಕವನ್ನು ಏಕಾಏಕಿ ಶೇ. 100ರಷ್ಟು ಏರಿಸಿತು. ಪ್ರತಿ ಪ್ರವಾಸಿಗನಿಗೆ ಇದ್ದ ಐದು ರೂ. ಪ್ರವೇಶ ಶುಲ್ಕ 10ಕ್ಕೆ ಏರಿತು. ಈ ಮೊದಲು ವಾಹನದ ಪ್ರವೇಶ ಶುಲ್ಕವೇ ಅದರ ಪ್ರಯಾಣಿಕರಿಗೂ ಅನ್ವಯವಾಗಿದ್ದರೆ ಈ ಹಂತದಲ್ಲಿ ಅವರೆಡನ್ನೂ ಪ್ರತ್ಯೇಕಿಸಲಾಯಿತು. ಪ್ರವಾಸಿಗ ದಾವಣಗೆರೆಯ ಜೋಸೆಫ್ ಇದನ್ನು ತೀವ್ರವಾಗಿ ವಿರೋಧಿ ಸಿ, ಹಿಂದಿನ ಲೇಸರ್ ಶೋ, ಸಂಗೀತ ಕಾರಂಜಿಗಳು ಈಗ ಸ್ಥಗಿತಗೊಂಡಿದ್ದರೂ ಪ್ರವೇಶ ಶುಲ್ಕವನ್ನು ಕಡಿಮೆ ಮಾಡಿಲ್ಲದಿರುವುದು ಸರ್ಕಾರವೇ ಜನರನ್ನು ವಂಚಿಸಿದಂತೆ ಎಂದು ಆರೋಪಿಸಿದರು.
ಹೆಸರು ಪ್ರಕಟಿಸಲಿಚ್ಛಿಸದ ಸ್ಥಳೀಯರೊಬ್ಬರು ಮಾತನಾಡಿ, ಜೋಗದ ದುಃಸ್ಥಿತಿಯ ಬಗ್ಗೆ ಅಹವಾಲು ಸಲ್ಲಿಸಿ ಸೋತುಹೋಗಿದ್ದೇವೆ. ಲಾಕ್‌ಡೌನ್‌ಗೆ ಮುನ್ನವೇ ಮೈಸೂರು ಬಂಗ್ಲೋ ಪ್ರದೇಶದಲ್ಲಿ ಬಿದ್ದ ಮರವನ್ನೂ ಈವರೆಗೆ ತೆರವುಗೊಳಿಸಲಾಗಿಲ್ಲ. ಜಲಪಾತದ ವೀಕ್ಷಣೆಗೆ ಅನುಕೂಲವಾಗಲಿ ಎಂದು ಹಾಕಿದ್ದ ಪ್ಲಾಸ್ಟಿಕ್ ಶೀಟ್‌ಗಳು ಒಡೆದಿದ್ದರೂ ಅದನ್ನು ಬದಲಿಸುವ ಕೆಲಸ ಆಗಿಲ್ಲ. ಜಲಪಾತಕ್ಕೆ ರಾತ್ರಿ ವಿದ್ಯುತ್ ದೀಪ ಹಾಕಿ ಪ್ರದರ್ಶಿಸುತ್ತೇವೆ ಎನ್ನುವ ಪ್ರಾಧಿಕಾರ ರಾತ್ರಿ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲು ಸಮಸ್ಯೆ ಪರಿಹರಿಸುತ್ತಿಲ್ಲ. ಇದರ ಜೊತೆಗೆ ಇಲ್ಲಿನ ಮಕ್ಕಳ ಉದ್ಯಾನವನ ಸಂಪೂರ್ಣ ಪಾಳುಬಿದ್ದಿದೆ. ಫುಡ್‌ಕೋರ್ಟ್ ಮಾಡುತ್ತೇವೆ ಎಂದು ಆರು ಕೋರ್ಟ್‌ಗಳ ನಿರ್ಮಾಣಕ್ಕೆ ಕಬ್ಬಿಣದ ಆಕೃತಿಗಳನ್ನು ನಿಲ್ಲಿಸಿರುವುದರಿಂದ ಪ್ರವಾಸಿಗರ ವಾಹನ ನಿಲ್ಲಿಸಲು ಇದ್ದ ಸ್ಥಳಾವಕಾಶ ಸುಮಾರು 50 ವಾಹನ ನಿಲ್ಲಿಸುವ ಸ್ಥಳಾವಕಾಶ ಕಡಿಮೆ ಆಗಿದೆ ಎಂಬುದನ್ನು ಬಿಟ್ಟರೆ ಫುಡ್ ಕೋರ್ಟ್ ಆರಂಭವಾಗಲೇ ಇಲ್ಲ ಎಂಬುದರತ್ತ ಗಮನ ಸೆಳೆಯುತ್ತಾರೆ.
ಸಣ್ಣಪುಟ್ಟ ಸಮಸ್ಯೆಗಳಂತೂ ಹಲವಾರಿವೆ. ಕೆಲ ದಿನಗಳ ಹಿಂದೆ ಹಣ ತೆತ್ತು ಕುಡಿಯುವ ನೀರು ಪಡೆಯುವ ಕೆಲಸ ಮಾಡುತ್ತಿರಲಿಲ್ಲ. ಶೌಚಾಲಯದ ನಿರ್ವಹಣೆ ಅತ್ಯಂತ ಕಳಪೆಯಾಗಿದ್ದು ದುರ್ವಾಸನೆ ಬೀರುವುದು ಸಾಮಾನ್ಯವಾಗಿದೆ. ನಿರ್ವಹಣಾ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ಟ್ರಾಫಿಕ್ ಜ್ಯಾಮ್, ಸಣ್ಣ ಪುಟ್ಟ ವಾಹನಗಳ ಡಿಕ್ಕಿ ಪ್ರಕರಣ ಬಂದೋಬಸ್ತ್ ನೋಡಿಕೊಳ್ಳುವವರಿಗೆ ಕಾಸು ಮಾಡಿಕೊಟ್ಟಿದೆ ಎಂಬುದನ್ನು ಬಿಟ್ಟರೆ ಸುಧಾರಣೆ ದೂರವಾಗಿದೆ.
ವಿಸ್ಮಯದಮುಂದುವರಿಕೆ! : ಪರಿಸ್ಥಿತಿ ಹೀನಾಯವಾಗಿದ್ದರೂ ಇಲ್ಲಿ ಪ್ರತಿಭಟಿಸುವವರಿಲ್ಲ. ಪ್ರವಾಸಿಗರು ದುಬಾರಿ ಪ್ರವೇಶದರ ಕಂಡು ಗೊಣಗುವುದು ಬಿಟ್ಟರೆ ಹೋರಾಟ ನಡೆಸುವ ಪುರುಸೊತ್ತು ಹೊಂದಿರುವುದಿಲ್ಲ. ಅವರೀಗ ನಾಲ್ಕು ಗಂಟೆಗಳ ಕಾಲ ಮಾತ್ರ ವೀಕ್ಷಣಾ ಪ್ರದೇಶದಲ್ಲಿರಬಹುದು. ಸ್ಥಳೀಯ ಅಂಗಡಿ, ಫೋಟೋಗ್ರಾಫರ್, ಹೋಂಸ್ಟೇಗಳ ಮಾಲೀಕರು ಮತ್ತಿತರ ವರ್ಗದವರು ತಮ್ಮ ಹಿತಾಸಕ್ತಿಗಳಿಗೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸುಮ್ಮನುಳಿದಿದ್ದಾರೆ. ಈ ಕಾರಣ ಜೋಗ ನಿರ್ವಹಣಾ ಪ್ರಾಧಿಕಾರದ ದುಬಾರಿ ಶುಲ್ಕ ವಸೂಲಿ ಹಾಗೂ ಕಳಪೆ ನಿರ್ವಹಣೆ ಮುಂದುವರಿದಿದೆ. ವಾರಾಂತ್ಯದಲ್ಲಿ ಈ ಸಮಸ್ಯೆಗಳ ಹೊರತಾಗಿಯೂ 10, 20 ಸಾವಿರದ ಸಂಖ್ಯೆಯಲ್ಲಿ ಜೋಗದತ್ತ ಜನ ಬರುವ ವಿಸ್ಮಯ ಮುಂದುವರಿದಿದೆ.
-ಮಾ.ವೆಂ.ಸ. ಪ್ರಸಾದ್