ವಾಷಿಂಗ್ಟನ್: ಅಮೆರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪುತ್ತಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎದುರಾಳಿಯಾಗಿರುವ ಜೋ ಬೈಡನ್ ಮತ್ತಷ್ಟು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದು, ಅಧ್ಯಕ್ಷಗಿರಿಗೆ ಕೆಲವೇ ಹೆಜ್ಜೆಗಳಷ್ಟು ಹಿಂದಿದ್ದಾರೆ.
ಡೆಮಾಕ್ಯಾಟ್ ಅಭ್ಯರ್ಥಿ ಜೋ ಬೈಡನ್ ಅವರು ಮಿಚಿಗನ್, ವಿಸ್ಕಾನ್ಸಿನ್ ರಾಜ್ಯಗಳನ್ನು ಗೆದ್ದುಕೊಂಡಿದ್ದಾರೆ. ಬೈಡೆನ್ 264 ಮತಗಳನ್ನು ಪಡೆದಿದ್ದು, ಅಧ್ಯಕ್ಷಗಿರಿ ಪಡೆಯಲು ಬೇಕಾದ 270 ಮತಗಳಿಂದ ಕೇವಲ ಆರು ಮತಗಳಿಂದ ಹಿಂದೆ ಇದ್ದಾರೆ. ಎದುರಾಳಿ ಡೊನಾಲ್ಡ್ ಟ್ರಂಪ್ 214 ಮತಗಳನ್ನು ಪಡೆದಿದ್ದಾರೆ.
ಅರಿಝೋನಾ ಮತ್ತು ನೆವಾಡ ರಾಜ್ಯಗಳಲ್ಲೂ ಬೈಡನ್ ಅವರು ಟ್ರಂಪ್ ಗಿಂತ ಮುನ್ನಡೆ ಸಾಧಿಸಿದ್ದಾರೆ. ಅರಿಝೋನಾದಲ್ಲಿ ಶೇ.86ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದ್ದು, ಡೊನಾಲ್ಡ್ ಟ್ರಂಪ್ 47.9% ಮತಗಳನ್ನು ಗಳಿಸಿದ್ದಾರೆ ಮತ್ತು ಜೋ ಬೈಡನ್ 50.7% ಮತಗಳನ್ನು ಗಳಿಸಿದ್ದಾರೆ. ನೆವಾಡಾದಲ್ಲಿ ಇದುವರೆಗೆ 86% ಮತಗಳನ್ನು ಎಣಿಕೆ ಮಾಡಲಾಗಿದ್ದು, ಡೊನಾಲ್ಡ್ ಟ್ರಂಪ್ 48.7% ಮತಗಳನ್ನು ಗಳಿಸಿದ್ದರೆ, ಜೋ ಬೈಡನ್ 49.3% ಮತಗಳನ್ನು ಪಡೆದಿದ್ದಾರೆ ಎಂದು ಎಡಿಸನ್ ರಿಸರ್ಚ್ ತಿಳಿಸಿದೆ.
ಇದನ್ನೂ ಓದಿ:ನಾಯಕ ಇಲ್ಲೇ ನಿರ್ಣಾಯಕ; ಫಲಿತಾಂಶದ ದಿಕ್ಕು ಬದಲಿಸುವ ಆರು ಪ್ರಾಂತ್ಯಗಳು
ಅಮೆರಿಕದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದು, ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಬೇಕಿದೆ. ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯಲಾಗುತ್ತದೆ. ಜೋ ಬೈಡನ್ 264 ಮತ ಗಳಿಸಿದ್ದು, ಅವರು ಅಧ್ಯಕ್ಷರಾಗಲು ಇನ್ನು ಕೇವಲ ಆರು ಎಲೆಕ್ಟೋರಲ್ ಮತಗಳು ಬೇಕಿದೆ.
ಬಹು ಚರ್ಚಿತ, ಬಹುನಿರೀಕ್ಷಿಅಮೆರಿಕ ಚುನಾವಣೆ ಫಲಿತಾಂಶ ಅಂತಿಮ ಹಂತ ತಲುಪುತ್ತಿದ್ದು, ಬಹುತೇಕ ಬೈಡನ್ ಅವರೇ ಅಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗುತ್ತಿದೆ.